ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅ.26ರಂದು ಬೆಳಗ್ಗೆ 10.30 ರಿಂದ 12.30 ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ಹಾಗೂ ಅಕ್ಟೋಬರ್ 27ರಂದು ಅಪರಾಹ್ನ 3 ರಿಂದ 5 ಗಂಟೆವರಿಗೆ ನಡೆಯುವ ವಿವಿಧ ಇಲಾಖೆ/ಸಂಸ್ಥೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕ, ಸೂಕ್ಷ್ಮ ಹಾಗೂ ಬಿಗಿ ಭದ್ರತೆಯೊಂದಿಗೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

- ಪಾರದರ್ಶಕತೆ, ಬಿಗಿ ಭದ್ರತೆಯೊಂದಿಗೆ ಪ್ರವೇಶ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮವಾಗಲಿ: ಡಿಸಿ ಸೂಚನೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅ.26ರಂದು ಬೆಳಗ್ಗೆ 10.30 ರಿಂದ 12.30 ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ಹಾಗೂ ಅಕ್ಟೋಬರ್ 27ರಂದು ಅಪರಾಹ್ನ 3 ರಿಂದ 5 ಗಂಟೆವರಿಗೆ ನಡೆಯುವ ವಿವಿಧ ಇಲಾಖೆ/ಸಂಸ್ಥೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕ, ಸೂಕ್ಷ್ಮ ಹಾಗೂ ಬಿಗಿ ಭದ್ರತೆಯೊಂದಿಗೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ/ ಸಂಸ್ಥೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಸಂಬಂಧ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅ.26ರಂದು ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆಗಳ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಭೂಮಾಪನ ಮತ್ತು ಕಂದಾಯ ವ್ಯವಸ್ಥೆ ಭೂ ದಾಖಲೆಗಳ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿನ ವಿವಿಧ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯು ನಗರದ 05 ಕೇಂದ್ರಗಳಲ್ಲಿ ನಡೆಯಲಿದೆ. 3221 ಅಭ್ಯರ್ಥಿಗಳು ಎರಡು ಪರೀಕ್ಷೆಯನ್ನು 2 ಅಧಿವೇಶನದಲ್ಲಿ ಬರೆಯುವರು ಹಾಗೂ ಅಕ್ಟೋಬರ್ 27ರಂದು ನಡೆಯುವ ನೇರ ನೇಮಕಾತಿ ಪರೀಕ್ಷೆಯು 04 ದಾವಣಗೆರೆ ಕೇಂದ್ರಗಳಲ್ಲಿ 2231 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯುವರು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಸಂಪೂರ್ಣ ತಡೆ ಒಡ್ಡಬೇಕು. ಅಭ್ಯರ್ಥಿಗಳನ್ನು ತಪಾಸಣೆ ಮಾಡುವಾಗ ಧಾರ್ಮಿಕ ಸಂಕೇತಗಳ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗದಂತೆ ಗೌರವಯುತವಾಗಿ ತಪಾಸಣೆ ನಡೆಸಬೇಕು ಎಂದರು.

ಪರೀಕ್ಷೆಯ ಹಿಂದಿನ ದಿನವೇ ಪರೀಕ್ಷಾ ಕೊಠಡಿಗಳು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಗೋಡೆ ಗಡಿಯಾರಗಳನ್ನು ಪರಿಶೀಲಿಸಬೇಕು. ಕೊಠಡಿಗಳನ್ನು ಸರಿಯಾಗಿ ಸೀಲ್ ಮಾಡಿ, ಕೀಲಿ ಕೈಗಳನ್ನು ಜವಾಬ್ದಾರಿಯುತ ಅಧಿಕಾರಿಗಳ ವಶದಲ್ಲೇ ಇಟ್ಟುಕೊಳ್ಳಬೇಕು ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಪರೀಕ್ಷಾರ್ಥಿಗಳ ತಪಾಸಣೆ ವೇಳೆಯಲ್ಲಿ ವಿನಾಕಾರಣ ವಿಳಂಬ ಮಾಡದೆ, ಸಮಯಪ್ರಜ್ಞೆ ಹಾಗೂ ಸೌಜನ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಡಿಡಿಪಿಯು ಪಳನಿಸ್ವಾಮಿ ಹಾಗೂ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಸಿಬ್ಬಂದಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌-1)

* 26ರಂದು ಪರೀಕ್ಷೆ ನಡೆಯುವ ಕೇಂದ್ರಗಳು (5-ದಾವಣಗೆರೆ): ನರ್ಸಿಂಗ್ ಆಫೀಸರ್, ಫಾರ್ಮಸಿ ಆಫೀಸರ್, ಕೆಇಎ-ಎಸ್.ಡಿ.ಎ, ಸಮಾಜ ಕಲ್ಯಾಣ ಇಲಾಖೆಯ ಶಿಕ್ಷಕರ ಹುದ್ದೆಗಳು:

(1) ಎ.ವಿ.ಕಮಲಮ್ಮ ಪಿಯು ಕಾಲೇಜು, ಪಿ.ಜೆ.ಬಡಾವಣೆ-600 ಅಭ್ಯರ್ಥಿಗಳು. (2) ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು, ಪಿ.ಜೆ.ಬಡಾವಣೆ-682. (3) ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಕಾಲೇಜು, ಪಿ.ಜೆ. ಬಡಾವಣೆ-682. (4) ಸರ್ಕಾರಿ ಬಾಲಕರ ಪಿಯು ಕಾಲೇಜು, ಪಿ.ಜೆ.ಬಡಾವಣೆ-681. (5) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಡೆಂಟಲ್ ಕಾಲೇಜು ರಸ್ತೆ, ಎಂಸಿಸಿ ಬ್ಲಾಕ್-576 ಅಭ್ಯರ್ಥಿಗಳು.

- - -

(ಬಾಕ್ಸ್‌-2)

* 27ರಂದು ಪರೀಕ್ಷೆ ನಡೆಯುವ ಕೇಂದ್ರಗಳು (5-ದಾವಣಗೆರೆ ): ಕನ್ನಡ ಭಾಷೆ, ಆಂಗ್ಲ ಮತ್ತು ಕಂಪ್ಯೂಟರ್ ಸಾಕ್ಷರತಾ (ಪತ್ರಿಕೆ -2) ಪರೀಕ್ಷೆ:

(1) ಎ.ವಿ.ಕಮಲಮ್ಮ ಪಿಯು ಕಾಲೇಜು, ಪಿ.ಜೆ.ಬಡಾವಣೆ-587 ಅಭ್ಯರ್ಥಿಗಳು. (2) ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿ.ಜೆ.ಬಡಾವಣೆ-717. (3) ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಕಾಲೇಜು, ಪಿ.ಜೆ.ಬಡಾವಣೆ- 713. (4) ಸರ್ಕಾರಿ ಬಾಲಕರ ಪಿಯು ಕಾಲೇಜು, ಪಿ.ಜೆ.ಬಡಾವಣೆ-204 ಅಭ್ಯರ್ಥಿಗಳು.

- - -

-23ಕೆಡಿವಿಜಿ35:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೇರ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಸಂಬಂಧ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.