10 ದಿನಗಳಲ್ಲಿ ಪೌರಕಾರ್ಮಿಕರ ನೇರ ನೇಮಕಾತಿ

| Published : Apr 24 2025, 11:46 PM IST

ಸಾರಾಂಶ

ಪಾರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ 2017ರಲ್ಲೇ ಆದೇಶ ಹೊರಡಿಸಿದೆ. ಹಲವಾರು ಪಾಲಿಕೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳು ನೇರನೇಮಕಾತಿ ಮಾಡಿಕೊಂಡು ಆದೇಶಪತ್ರವನ್ನೂ ವಿತರಿಸಿವೆ. ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ನೇರ ನೇಮಕಾತಿ ಮಾಡಿಕೊಳ್ಳದೆ, ಆದೇಶ ಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಮುಂಬರುವ 10 ದಿನಗಳಲ್ಲಿ ಪಾಲಿಕೆಯ ಪೌರಕಾರ್ಮಿಕರಿಗೆ ನೇರ ನೇಮಕಾತಿ ಪತ್ರ ವಿತರಿಸುವುದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಲಿಖಿತ ಭರವಸೆ ನೀಡಿದರು.

ಅಲ್ಲದೆ, ಗುರುವಾರ ನಿಧನಳಾದ ಪೌರಕಾರ್ಮಿಕೆ ಮಂಜುಳಾ ಕಬ್ಬಿನ ಕುಟುಂಬಕ್ಕೆ ಪಾಲಿಕೆಯಿಂದ ₹10 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.

ಕಳೆದ 8 ವರ್ಷಗಳಿಂದ ಪಾಲಿಕೆ ನೇರ ನೇಮಕಾತಿ ಪತ್ರ ವಿತರಿಸಿಲ್ಲ. ಅನೇಕ ಹೋರಾಟ, ಮನವಿ ಮಾಡಿದರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದೇಶಪತ್ರಕ್ಕಾಗಿ ಕಚೇರಿಗೆ ಅಲೆದು ಮಾನಸಿಕವಾಗಿ ನೊಂದು ಪೌರ ಕಾರ್ಮಿಕ ಮಹಿಳೆ ಮಂಜುಳಾ ಕಬ್ಬಿನ ಮೃತಪಟ್ಟಿದ್ದಾಳೆ. ಈ ಮಹಿಳೆ ಸಾವಿಗೆ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೌರಕಾರ್ಮಿಕರು ಪಾಲಿಕೆ ಆವರಣದಲ್ಲಿ ಗುರುವಾರ ಶವವಿಟ್ಚು ನಡೆಸಿದ ಧರಣಿಗೆ ಮಣಿದು ಪಾಲಿಕೆಯ ಈ ನಿರ್ಧಾರವನ್ನು ಆಯುಕ್ತರು ಪ್ರಕಟಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ: ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪಾರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ 2017ರಲ್ಲೇ ಆದೇಶ ಹೊರಡಿಸಿದೆ. ಹಲವಾರು ಪಾಲಿಕೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳು ನೇರನೇಮಕಾತಿ ಮಾಡಿಕೊಂಡು ಆದೇಶಪತ್ರವನ್ನೂ ವಿತರಿಸಿವೆ. ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ನೇರ ನೇಮಕಾತಿ ಮಾಡಿಕೊಳ್ಳದೆ, ಆದೇಶ ಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ಜುಲೈ ಮತ್ತು ಡಿಸೆಂಬರ್‌ ತಿಂಗಳಲ್ಲಿ ಪ್ರತಿಭಟನೆ ಮಾಡಿದ ವೇಳೆ 15 ದಿನಗಳಲ್ಲೇ ಆದೇಶ ಪತ್ರ ನೀಡುವುದಾಗಿ ಹೇಳಿದ್ದರು. ಐದು ತಿಂಗಳು ಕಳೆದರೂ ನೀಡಿಲ್ಲ. 2017ರ ಸರ್ಕಾರದ ನೇರನೇಮಕಾತಿ ಆದೇಶದಲ್ಲಿ ಸಿಂಧುತ್ವ ಪ್ರಮಾಣಪತ್ರ ನೀಡುವ ಕುರಿತಂತೆ ಪ್ರಸ್ತಾಪವಿಲ್ಲ. ಆದರೆ, ಪಾಲಿಕೆ ಮಾತ್ರ ಸಿಂಧುತ್ವ ಪ್ರಮಾಣಪತ್ರ ನೀಡಿದರೆ ಆದೇಶ ನೀಡುವುದಾಗಿ ಹೇಳುತ್ತಿದೆ. ಈ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಅಲೆದು, ಅಲೆದು ಮಾನಸಿಕವಾಗಿ ನೊಂದ ಪೌರಕಾರ್ಮಿಕ ಮಹಿಳೆ ಮಂಜುಳಾ ಕಬ್ಬಿನ ಮೃತಪಟ್ಟಿದ್ದಾರೆ. ಅವರ ಕುಟುಂಬ ಬೀದಿಗೆ ಬಿದ್ದಿದೆ. ಇದಕ್ಕೆ ಪಾಲಿಕೆ ನಿರ್ಲಕ್ಷ್ಯವೇ ಕಾರಣ. ಈಗಲಾದರೂ ಪೌರಕಾರ್ಮಿಕರಿಗೆ ಆದೇಶಪತ್ರ ವಿತರಿಸುವಂತೆ ಆಗ್ರಹಿಸಿ ಸುಮಾರು 2 ಗಂಟೆಗಳ ಕಾಲ ಧರಣಿ ನಡೆಸಿದರು.

ಈ ವೇಳೆ ಧರಣಿ ಸ್ಥಳಕ್ಕೆ ಬಂದ ಮೇಯರ್‌ ರಾಮಪ್ಪ ಬಡಿಗೇರ ಮತ್ತು ಆಯುಕ್ತ ರುದ್ರೇಶ ಘಾಳಿ ಅವರು, ಪಾಲಿಕೆಯಿಂದ 127 ಜನರಿಗೆ ಮುಂದಿನ 10 ದಿನದ ಒಳಗಾಗಿ ನೇರನೇಮಕಾತಿ ಆದೇಶಪತ್ರ ವಿತರಿಸಲಾಗುವುದು. ಮೃತ ಮಹಿಳೆ ಮಂಜುಳಾ ಕಬ್ಬಿನ ಪುತ್ರಿಗೆ ಉದ್ಯೋಗ ನೀಡಿ ನೀಡಿಕೆ, ಪೌರಕಾರ್ಮಿಕರ ಇನ್ನಿತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.

ಲಿಖಿತ ಭರವಸೆ:

ಆದರೂ ಪಟ್ಟುಬಿಡದ ಪ್ರತಿಭಟನಾಕಾರರು ಮೃತಳ ಪುತ್ರಿಗೆ ನೇರನೇಮಕಾತಿ ಆದೇಶಪತ್ರ ವಿತರಿಸುವುದಾಗಿ ಲಿಖಿತ ಭರವಸೆ ನೀಡಬೇಕು. ಅಲ್ಲದೆ ₹50 ಲಕ್ಷ ಪರಿಹಾರ ವಿತರಿಸಬೇಕು. ಅಲ್ಲಿಯ ವರೆಗೂ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಿದರು.

ಹೋರಾಟಕ್ಕೆ ಮಣಿದ ಮೇಯರ್ ಮತ್ತು ಆಯುಕ್ತರು ಚರ್ಚಿಸಿ ಲಿಖಿತ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಅಂತಿಮ ಸಂಸ್ಕಾರಕ್ಕೆ ಶವ ತೆಗೆದುಕೊಂಡು ಹೋದರು.

ಪ್ರತಿಭಟನೆಯಲ್ಲಿ ಗುತ್ತಿಗೆದಾರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಕಾರ್ಮಿಕ ಮುಖಂಡರು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಿದ 30 ಜನರಿಗೆ ನಾಳೆ ನೇರನೇಮಕಾತಿ ಆದೇಶ ವಿತರಿಸಲಾಗುವುದು. ಉಳಿದ ಪೌರಕಾರ್ಮಿಕರಿಗೆ 10 ದಿನಗಳಲ್ಲಿ ಆದೇಶಪತ್ರ ವಿತರಿಸಲು ಆಯುಕ್ತರಿಗೆ ತಿಳಿಸಿದ್ದೇನೆ. ಸರ್ಕಾರಿ ಆದೇಶದಂತೆ ₹10ಲಕ್ಷ ಪರಿಹಾರ ನೀಡಲಾಗಿದೆ. ಮೃತ ಮಹಿಳೆ ಮಗಳು ಸುಮಾಗೆ ನೇರನೇಮಕಾತಿ ಆದೇಶ ಪತ್ರ ವಿತರಿಸಲಾಗುವುದು ಎಂದು ಪಾಲಿಕೆ ಮೇಯರ್‌ ರಾಮಪ್ಪ ಬಡಿಗೇರ ತಿಳಿಸಿದರು.