ಯಾವುದು ಆಯುರ್ವೇದವೋ ಅದೇ ಯೋಗ, ಯಾವುದು ಯೋಗವೋ ಅದೇ ಧರ್ಮ, ಯಾವುದು ಧರ್ಮವೋ ಅದೇ ಅಧ್ಯಾತ್ಮ. ಆಹಾರಕ್ಕೂ ಅಧ್ಯಾತ್ಮಕ್ಕೂ ನೇರ ಸಂಬಂಧವಿದೆ.

ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ । ಗೋಮಾಂತಕ ಸಮಾಜದಿಂದ ಸ್ವರ್ಣಪಾದುಕಾ ಪೂಜೆ

ಕನ್ನಡಪ್ರಭ ವಾರ್ತೆ ಗೋಕರ್ಣ

ಯಾವುದು ಆಯುರ್ವೇದವೋ ಅದೇ ಯೋಗ, ಯಾವುದು ಯೋಗವೋ ಅದೇ ಧರ್ಮ, ಯಾವುದು ಧರ್ಮವೋ ಅದೇ ಅಧ್ಯಾತ್ಮ. ಆಹಾರಕ್ಕೂ ಅಧ್ಯಾತ್ಮಕ್ಕೂ ನೇರ ಸಂಬಂಧವಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯಿತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದಲ್ಲಿ ಅನ್ನಂ ಬ್ರಹ್ಮ ವಿಷಯದಲ್ಲಿ ಪ್ರವಚನವನ್ನು ಅನುಗ್ರಹಿಸಿ, ಪಾಶ್ಚಿಮಾತ್ಯ ಪದ್ಧತಿಗಳು ರೋಗ ಬಂದ ಮೇಲೆ ಅದನ್ನು ಹೇಗೆ ಸರಪಡಿಸಬೇಕು ಎಂದು ಚಿಂತಿಸುತ್ತವೆ. ಆದರೆ ನಮ್ಮ ಪ್ರಾಚೀನರು ಆಯುರ್ವೇದಾದಿಗಳ ಮೂಲಕ ರೋಗ ಬರದಂತೆ ಸ್ವಸ್ಥವಾಗಿ ಬದುಕುವ ಜೊತೆಗೆ ಪಾಪವನ್ನೂ ಕಳೆದುಕೊಳ್ಳುವ ದಾರಿಯನ್ನು ಎಂದೋ ಕಂಡುಕೊಂಡಿದ್ದಾರೆ. ಆಯುರ್ವೇದ, ಧರ್ಮಶಾಸ್ತ್ರ ಹಾಗೂ ಯೋಗ ಶಾಸ್ತ್ರ ಎಲ್ಲವೂ ಒಂದನ್ನೇ ಬೋಧಿಸುವುದಾಗಿದ್ದು, ಇವೆಲ್ಲವೂ ಇಹದಲ್ಲೂ ಪರದಲ್ಲೂ ಸುಖವಾಗಿರುವ ದಾರಿಯನ್ನು ತೋರುತ್ತವೆ ಎಂದು ಅಭಿಪ್ರಾಯಪಟ್ಟರು.

ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ ಸಮರ್ಪಿತವಾಯಿತು. ಈ ಬಾರಿ ಚಾತುರ್ಮಾಸ್ಯದಲ್ಲಿ ಸಮಾಜದ ಹಿತವನ್ನು ಮುಖ್ಯವಾಗಿಸಿಕೊಂಡು ಆಹಾರದ ವಿಚಾರದಲ್ಲಿ ಸರಿ ತಪ್ಪುಗಳನ್ನು ತಿಳಿಸಿಕೊಡುವ ಕಾರ್ಯ ನಡೆಯುತ್ತಿದ್ದು, ಸಮಾಜ ಇದರ ಸದುಪಯೋಗ ಪಡೆದುಕೊಳ್ಳಲಿ. ಹವ್ಯಕ ಮಹಾಸಭೆಯ ಜೊತೆ ಗುರುಪೀಠ ಸದಾ ಇರಲಿದೆ ಎಂದು ಆಶೀರ್ವದಿಸಿದರು.

ಮಹಾಸಭೆಯ ಪರ ಮಾತನಾಡಿದ ಡಾ. ಗಿರಿಧರ ಕಜೆ, ಮಹಾಸಭೆ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬೆಳೆದು ಬಂದ ಸಂಸ್ಥೆಯಾಗಿದ್ದು, ೮೩ ವರ್ಷಗಳಿಂದ ಸಮಾಜದ ಹಿತಚಿಂತನೆಯಲ್ಲಿ ತೊಡಗಿಕೊಂಡಿದೆ. ಸಮಾಜದಲ್ಲಿ ನಮ್ಮ ಸಂಸ್ಕಾರವನ್ನು ಜಾಗೃತಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ಮಹಾಸಭೆ ಹಾಕಿಕೊಂಡಿದ್ದು, ಇವೆಲ್ಲವಕ್ಕೂ ಶ್ರೀಗಳ ಮಾರ್ಗದರ್ಶನವನ್ನು ಪ್ರಾರ್ಥಿಸಿದರು. ಹವ್ಯಕ ಮಹಾಸಭೆಯ ಪರವಾಗಿ ರವಿ ನಾರಾಯಣ ಪಟ್ಟಾಜೆ ದಂಪತಿ ಗುರುಭಿಕ್ಷಾಸೇವೆ ಸಮರ್ಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಸೇರಿದಂತೆ ನಿರ್ದೇಶಕರು, ಸಂಚಾಲಕರು ಉಪಸ್ಥಿತರಿದ್ದರು.

ಗೋಮಾಂತಕ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:

ಕರ್ನಾಟಕ-ಗೋವಾ-ಮಹಾರಾಷ್ಟ್ರಗಳಲ್ಲಿ ವ್ಯಾಪಿಸಿರುವ ಗೋಮಾಂತಕ ಸಮಾಜವು ಹೊಸದಾಗಿ ಶ್ರೀಮಠದ ಶಿಷ್ಯಭಾವದಲ್ಲಿ ಸೇರ್ಪಡೆಯಾಗಿದ್ದು, ನೀವು ಇಲ್ಲಿ ಸಮರ್ಪಿಸುವ ಫಲವು ನಿಮ್ಮ ಭಕ್ತಿಯ ಪ್ರತೀಕವಾದರೆ, ನಾವು ನೀಡುವ ಮಂತ್ರಾಕ್ಷತೆಯು ಗುರುಪೀಠದ ಆಶೀರ್ವಾದವಾಗಿದೆ. ಸಮಾಜದ ನೋವು ನಲಿವುಗಳ ಜೊತೆ ಗುರುಪೀಠ ಸದಾ ಇರಲಿದ್ದು, ನಿಮ್ಮ ಮನೆಭಾಷೆಯಾದ ಕೊಂಕಣಿಯನ್ನು ಕಲಿತು ನಿಮ್ಮೊಂದಿಗೆ ವ್ಯವಹರಿಸುವ ಭಾವ ನಮ್ಮದು ಎಂದು ಶ್ರೀಗಳು ಗೋಮಾಂತಕ ಸಮಾಜವನ್ನು ಆಶೀರ್ವದಿಸಿದರು.

ಗೋಮಾಂತಕ ಸಮಾಜದ ರಮೇಶ್ ನಾಯ್ಕ ಜೋಯಿಡಾ, ಭಾಸ್ಕರ ನಾರ್ವೇಕರ, ದೇವದಾಸ ಶೆಜವಾಡಕರ್, ದಿನಕರ ಅಂಕೋಲೇಕರ, ಗುರುನಾಥ ಕಾಮತ್ ಸೇರಿದಂತೆ ಗೋವಾ- ಕರ್ನಾಟಕ ಭಾಗದ ನೂರಾರು ಗೋಮಾಂತಕ ಸಮಾಜದವರು ಉಪಸ್ಥಿತರಿದ್ದು, ಸ್ವರ್ಣ ಪಾದುಕಾ ಪೂಜೆ ಸಮರ್ಪಿಸಿದರು.