ರಮೇಶ್‌ಕುಮಾರ್ ಅವರು ಸಚಿವರೊಂದಿಗೆ ಮಾತನಾಡಿ, ಇದೀಗ ಎತ್ತಿನ ಹೊಳೆ ನೀರನ್ನು ಕಣ್ಣಾರೆ ನೋಡಬಹುದು ಎಂದು ಹೇಳುವ ಧೈರ್ಯ ನನಗೆ ಬಂದಿದೆ ಎಂಧರು.

ಸಚಿವ ಚೆಲುವರಾಯಸ್ವಾಮಿ ಭೇಟಿಯಾದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ । ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಸೂಚನೆ

ಕನ್ನಡಪ್ರಭ ವಾರ್ತೆ ಕೋಲಾರ

ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಚೆಲುವರಾಜಸ್ವಾಮಿ ಬಯಲು ಸೀಮೆಯ ಬಹು ನಿರೀಕ್ಷಿತ ಯೋಜನೆಯಾದ ಎತ್ತಿನಹೊಳೆ ಕಾಮಗಾರಿಯನ್ನು ೨೦೨೭ರ ಮಧ್ಯ ಭಾಗದೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೃಹತ್ ನೀರಾವರಿ ಸಚಿವ ಚೆಲುವರಾಯಸ್ವಾಮಿ ಅವರ ಅಧಿಕೃತ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅವರ ಮನವಿಗೆ ಸ್ಪಂದಿಸಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಇಂಜಿನಿಯರ್ ಮತ್ತು ಸಿಬ್ಬಂದಿಗೆ ಅವರು ಸೂಚನೆ ನೀಡಿದರು.

ಸೆಪ್ಟೆಂಬರ್ ತಿಂಗಳ ಅಂತ್ಯದೊಳಗಾಗಿ ಶ್ರೀನಿವಾಸಪುರ ಪ್ಯಾಕೇಜ್ ೨ ಮತ್ತು ೩ಕ್ಕೆ ಅಗತ್ಯವಿರುವ ವಿವರಗಳನ್ನು ದೊಡ್ಡಬಳ್ಳಾಪುರದಲ್ಲಿರುವ ವಿಶೇಷ ಸ್ವಾಧೀನ ಅಧಿಕಾರಿಗಳಿಗೆ ಅಕ್ಟೋಬರ್ ಮೊದಲ ವಾರದಲ್ಲಿ ಸಲ್ಲಿಸಬೇಕೆಂದು ಮಂತ್ರಿಗಳು ಸ್ಪಷ್ಟ ಆದೇಶ ನೀಡಿದರು.

ರಮೇಶ್‌ಕುಮಾರ್ ಅವರ ಮನವಿಗೆ ಸ್ಪಂದಿಸಿದ ಸಚಿವರು, ಇದಾದ ನಂತರ ಸ್ವಾಧೀನಾಧಿಕಾರಿಗಳು ನವೆಂಬರ್ ಮಾಹೆಯ ಮಧ್ಯಭಾಗದಲ್ಲಿ ಸ್ವಾಧೀನ ಪ್ರಕ್ರಿಯೆಗೆ ಕಾರ್ಯೋನ್ಮುಖರಾಗಬೇಕೆಂದು ಮಂತ್ರಿಗಳು ನಿರ್ದೇಶಿಸಿದರು. ಈ ಕಾರ್ಯಗಳು ಅಂದರೆ ಪ್ಯಾಕೇಜ್ ೧, ೨ ಮತ್ತು ೩ರ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಪೈಪ್ಲೈನ್ ಹಾಕುವ ಕೆಲಸವನ್ನು ಡಿಸೆಂಬರ್ ಮಧ್ಯಭಾಗದಲ್ಲಿ ಅಥವಾ ಜನವರಿ ೨೦೨೭ರ ಪ್ರಾರಂಭದಲ್ಲಿ ಕೈಗೊಳ್ಳಬೇಕೆಂದು, ಜನವರಿ ೨೦೨೭ ರಿಂದ ಜೂನ್-ಜುಲೈ ೨೦೨೭ರ ವರೆವಿಗೆ ಈ ಕೆಲಸವನ್ನು ಪೂರೈಸಬೇಕೆಂದು ಕಟ್ಟಪ್ಪಣೆ ನೀಡಿದರು.

ಸಚಿವರ ಸೂಚನೆಗೆ ರಮೇಶ್‌ಕುಮಾರ್ ಹರ್ಷ:

ರಮೇಶ್‌ಕುಮಾರ್ ಅವರು ಸಚಿವರೊಂದಿಗೆ ಮಾತನಾಡಿ, ಇದೀಗ ಎತ್ತಿನ ಹೊಳೆ ನೀರನ್ನು ಕಣ್ಣಾರೆ ನೋಡಬಹುದು ಎಂದು ಹೇಳುವ ಧೈರ್ಯ ನನಗೆ ಬಂದಿದೆ. ಎತ್ತಿನಹೊಳೆ ಒಂದು ಬೃಹತ್ ಕುಡಿಯುವ ನೀರಿನ ಯೋಜನೆ ಕರ್ನಾಟಕ ಸರ್ಕಾರವು ೨೦೧೪ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅನುಮೋದಿಸಿದ ಯೋಜನೆಯಾಗಿದೆ ಎಂದರು.

ಪಶ್ಚಿಮಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ ೨೪.೦೧ ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು ೦೭ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ ೨೯ ತಾಲೂಕಿನ ೩೮ ಪಟ್ಟಣ ಪ್ರದೇಶದ ಹಾಗೂ ೬೬೫೭ ಗ್ರಾಮಗಳ ಸುಮಾರು ೯೫ ಲಕ್ಷ ಜನರಿಗೆ ಇದರ ನೇರ ಪ್ರಯೋಜನ ಲಭಿಸುತ್ತದೆ ಎಂದು ತಿಳಿಸಿದರು.

ಎತ್ತಿನಹೊಳೆ, ವಾಟದಹೊಳೆ ಮತ್ತಿತರ ಒಟ್ಟು ೭ ಕೊಳ್ಳಗಳಿಂದ ಮಳೆಗಾಲದಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ಅಲ್ಲಿಂದ ಒಳಬರುವ ನೀರನ್ನು ಸಂಗ್ರಹಿಸಿ ವಿತರಣೆ ಮಾಡುವ ಯೋಜನೆ ಇದು. ಇದರ ಮೂಲ ಅಂದಾಜು ೧೨ ಸಾವಿರ ಕೋಟಿ ರುಪಾಯಿಗಳು, ಕುಡಿಯುವ ನೀರಿನ ಜೊತೆಗೆ ಸುಮಾರು ೫೫೦ ಕೆರೆಗಳಿಗೆ ಶೇ. ಅರ್ಧದಷ್ಟು ನೀರು ತುಂಬಿಸಿ ಅಂತರ್ಜಲ ವೃದ್ಧಿಸುವುದು ಈ ಯೋಜನೆಯಲ್ಲಿ ಒಳಗೊಂಡಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಬೈರಗೊಂಡ್ಲು ಜಲಾಶಯದಿಂದ ಮಧುಗಿರಿ ಮಾರ್ಗವಾಗಿ ಕೊರಟಗೆರೆ ವರೆಗಿನ ಪೈಪ್ಲೈನ್ ಕೆಲಸ ಪೂರ್ಣಗೊಂಡಿದೆ. ದೊಡ್ಡಬಳ್ಳಾಪುರ ತಾಲೂಕಿನ ವೈ ಜಂಕ್ಷನ್ ಇಂದ ಆಗಬೇಕಾಗಿದ್ದ ಪೈಪ್ಲೈನ್ ಕೆಲಸ ಪೂರ್ಣ ಆಗಿದೆ. ವೈ ಜಂಕ್ಷನ್‌ನಿಂದ ಗೌರಿಬಿದನೂರು ವರೆಗಿನ ಪೈಪ್ ಲೈನ್ ಕೆಲಸವು ಪೂರ್ಣಗೊಂಡಿದೆ ಎಂದು ಸಚಿವರು ರಮೇಶ್‌ಕುಮಾರ್ ಅವರಿಗೆ ತಿಳಿಸಿದರು.

ಮೊದಲನೇ ಪ್ಯಾಕೇಜ್ ಸ್ವಾಧಿನ ಪ್ರಕ್ರಿಯೆ ಪೂರ್ಣ ಆಗಿದ್ದು, ಅವಾರ್ಡ್ ಪಾಸ್ ಆಗಿದೆ. ೨ ಮತ್ತು ೩ನೇ ಪ್ಯಾಕೇಜ್‌ಗಳಿಗೆ ಅಗತ್ಯವಿರುವ ವಿವರಗಳನ್ನು ಸ್ವಾಧೀನ ಅಧಿಕಾರಿಗಳಿಗೆ ಯೋಜನೆಯ ವಿಭಾಗೀಯ ಇಂಜಿನಿಯರ್‌ಗಳು ನೀಡಬೇಕಾಗಿದೆ ಎಂದರು.

೧೯೭೮ರ ವಿಧಾನಸಭೆಯ ಚುನಾವಣೆಯ ಮುಖೇನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾರ್ವಜನಿಕ ಜೀವನ ಮತ್ತು ಅವಿಭಾಜ್ಯ ಕೋಲಾರ ಜಿಲ್ಲೆಯ ಸಾರ್ವಜನಿಕ ಜೀವನಕ್ಕೆ ಸಕ್ರಿಯವಾಗಿ ಕಾಲಿಟ್ಟ ನಾನು ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ ಎಂದರು.

ಈ ಅವಿಭಾಜ್ಯ ಕೋಲಾರ ಜನ, ವಿಶೇಷವಾಗಿ ಶ್ರೀನಿವಾಪುರ ವಿಧಾನಸಭಾ ಕ್ಷೇತ್ರದ ಜನ, ಅತೀ ಸಾಮಾನ್ಯ ಕುಟುಂಬದ ಹಿನ್ನೆಲೆಯ ನನ್ನನ್ನು ಗೌರವಿಸಿ, ಗುರುತಿಸಿದ್ದಾರೆ. ನಾನು ನನ್ನನ್ನ ಕಡೆಯ ಉಸಿರು ಇರುವವರೆವಿಗೂ ಋಣ ತೀರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮುಂದುವರೆಸುತ್ತೇನೆ ಎಂದರು.

ನಾನು ಯಾವುದೇ ಜವಾಬ್ದಾರಿ ಸ್ಥಾನದಲ್ಲಿ ಇಲ್ಲದೇ ಇದ್ದರೂ, ತಮ್ಮ ಅಮೂಲ್ಯ ವೇಳೆಯನ್ನು ನನಗಾಗಿ ಮೀಸಲಿಟ್ಟು ಎಲ್ಲಾ ಅಧಿಕಾರಿ ವರ್ಗದವರನ್ನು ಕರೆಸಿ, ಯೋಜನೆಯ ಸಂಪೂರ್ಣ ವಿವರಗಳನ್ನು ನೀಡಿ ತಾರ್ಕಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಜ್ಜನಿಕೆಯನ್ನು ವ್ಯಕ್ತಪಡಿಸಿದ ಸದಿವ ಎನ್. ಚಲುವರಾಯಸ್ವಾಮಿ, ಮುಖ್ಯಮಂತ್ರಿ .ಕೆ.ಶಿವಕುಮಾರ್ ರವರಿಗೆ ಹಾಗೂ ಈ ಯೋಜನೆಯನ್ನು ೨೦೧೪ ರಲ್ಲಿ ಮಂಜೂರು ಮಾಡಿದ ಶ್ರೀ ಸಿದ್ದರಾಮಯ್ಯನವರಿಗೂ ನಮ್ಮ ೨ ಜಿಲ್ಲೆಯ ರೈತ ಜನಾಂಗದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.