ಕನ್ನಡಪ್ರಭ ವಾರ್ತೆ ಆಲಮಟ್ಟಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಹೆಚ್ಚಲು ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಮಾಹಿತಿ ನೀಡಬೇಕು ಎಂದು ಮುದ್ದೇಬಿಹಾಳ ಶಾಸಕ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಹೆಚ್ಚಲು ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಮಾಹಿತಿ ನೀಡಬೇಕು ಎಂದು ಮುದ್ದೇಬಿಹಾಳ ಶಾಸಕ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.ಸಮೀಪದ ಯಲಗೂರ ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ರಸ್ತೆ, ನೀರಾವರಿ ಸೇರಿದಂತೆ ಜನರ ಅಗತ್ಯಗಳಿಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸರ್ಕಾರದಿಂದ ಕ್ಷೇತ್ರಕ್ಕೆ ಲಭ್ಯವಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹಿಂದಿನ ಆಡಳಿತದಲ್ಲಿ ಹಣಕಾಸಿನ ಅನುಮೋದನೆ ಇಲ್ಲದೆ ಕೈಗೊಂಡ ಕಾಮಗಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿದಿತ್ತು. ಜನರ ಹಿತದೃಷ್ಟಿಯಿಂದ ಹಿಂದಿನ ಕಾಮಗಾರಿಗಳ ಜವಾಬ್ದಾರಿಯನ್ನೂ ಸರ್ಕಾರವೇ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಪಂಚ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ₹ 90 ಸಾವಿರದಿಂದ ₹ 1 ಲಕ್ಷಕ್ಕೂ ಅಧಿಕ ಕೋಟಿ ಆರ್ಥಿಕ ನೆರವು ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಿ ಜಮೀನು, ಗೋಮಾಳ ಹಾಗೂ ಪಡಾ ಭೂಮಿಯನ್ನು ಗುರುತಿಸಿ ವರದಿ ನೀಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ ಎಂದರು.ಪಿಕೆಪಿಎಸ್ ಅಧ್ಯಕ್ಷ ಶ್ಯಾಮ ಪಾತರದ, ಮುತ್ತಣ್ಣ ಮುತ್ತಣ್ಣವರ, ಶಾಸಕ ಸಿ.ಎಸ್.ನಾಡಗೌಡ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎ.ಡಿ.ಅಮರವಾದಗಿ, ತಾಪಂ ಇಒ ವೆಂಕಟೇಶ ವಂದಾಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ ಮಾಗಿ, ಬಿಇಒ ಎಂ.ಎಸ್.ಬಡದಾನಿ, ಯತೀಶ್ ಕೆ.ಎನ್. ಎಸ್.ಡಿ.ಕುಂಬಾರ, ಅಬೂಬಕರ ಬಾಗವಾನ, ಸಲೀಂ ಯಲಗೋಡ, ನಾನಾಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು. ವಿವಿಧ ಇಲಾಖೆಗೆ ಸಂಬಂಧಿಸಿದ ಒಟ್ಟು 29 ಅರ್ಜಿಗಳನ್ನು ಅಭಿಯಾನದಲ್ಲಿ ಸ್ವೀಕರಿಸಲಾಯಿತು.