ಸಾರಾಂಶ
ಭಾರತವು ಯಾವುದರಲ್ಲಿಯೂ ಕಡಿಮೆ ಇಲ್ಲ. ಇಂದು ದೇಶ ಪ್ರತಿ ಕ್ಷೇತ್ರದಲ್ಲೂ ಮುಂದುವರೆಯುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತವು ಜಾಗತಿಕ ರೇಷ್ಮೆ ನಾಯಕನಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಎಸ್. ಗಾಂಧಿ ದಾಸ್ ತಿಳಿಸಿದರು.ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತವು ಯಾವುದರಲ್ಲಿಯೂ ಕಡಿಮೆ ಇಲ್ಲ. ಇಂದು ದೇಶ ಪ್ರತಿ ಕ್ಷೇತ್ರದಲ್ಲೂ ಮುಂದುವರೆಯುತ್ತಿದೆ. ನಾವು ಸಹ ಕೈಜೋಡಿಸಬೇಕು ಎಂದರು.ನಮ್ಮ ಎಲ್ಲಾ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ತಾವು ತಲ್ಲೀನರಾಗಿ ಹೊಸ ಆವಿಷ್ಕಾರಗಳನ್ನು ಹೊರತಂದು, ಇದನ್ನು ನಾವು ದೇಶದ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಬೇಕು. ಸಂಸ್ಥೆಯ ಹೊಸ ಅವಿಷ್ಕಾರಗಳಿಂದ ರೈತರಿಗೆ ತುಂಬಾ ಉಪಯೋಗವಾಗುತ್ತದೆ. ಭಾರತದ ಬೆನ್ನೆಲುಬು ರೈತ. ನಾವು ಹೆಚ್ಚು ಸಂಶೋಧನೆ ಮಾಡಿದಷ್ಟು ರೈತರಿಗೆ ಮತ್ತು ದೇಶದ ಆರ್ಥಿಕ ವಲಯಕ್ಕೆ ಬಹಳ ಅನುಕೂಲವಾಗಲಿದೆ ಎಂದು ಅವರು ಹೇಳಿದರು.ರೇಷ್ಮೆ ಉದ್ಯಮದಲ್ಲಿ ಭಾರತವನ್ನು ವಿಶ್ವ ಗುರು ಮಾಡುವ ನಿಟ್ಟಿನಲ್ಲಿ ಕೇಂದ್ರ ರೇಷ್ಮೆ ಮಂಡಳಿಯು ಪ್ರಮುಖ ಪಾತ್ರ ವಹಿಸುತ್ತಿದೆ. ಹಾಗೂ ರೇಷ್ಮೆ ಉದ್ಯಮದ ಅಭಿವೃದ್ದಿಗೆ ಬೇಕಾದ ಎಲ್ಲಾ ಚಟುವಟಿಕೆಗಳಿಗೆ ಸಹಕರಿಸುತ್ತಿದೆ. ರೇಷ್ಮೆ ಉದ್ಯಮದಲ್ಲಿ ಭಾರತವು ವಿಶ್ವ ಗುರುವಾಗಲು ನಾವು ಒಗ್ಗೂಡಿ ಸೇವೆ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.ಇದೇ ವೇಳೆ ಕೇಂದ್ರ ರೇಷ್ಮೆ ಮಂಡಳಿ ಸ್ಥಾಪನೆಯಾಗಿ 75 ವರ್ಷಗಳ ಪೂರೈಸಿದ ಪ್ರಯುಕ್ತ 75 ಹಿಪ್ಪುನೇರಳೆ ಸಸಿಗಳನ್ನು ಸಂಸ್ಥೆಯಲ್ಲಿ ಆವರಣದಲ್ಲಿ ನೆಡಲಾಯಿತು.ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಕೆ.ಬಿ. ಚಂದ್ರಶೇಖರ್, ಡಾ.ಆರ್. ಭಾಗ್ಯ, ಡಾ.ಎಸ್. ಬಾಲಸರಸ್ವತಿ, ಡಾ. ಮೀನಾಲ್, ಡಾ.ಸಿ.ಎಂ. ಬಾಬು ಮೊದಲಾದವರು ಇದ್ದರು.