ಸಾರಾಂಶ
ಮಂಡ್ಯ ಸಿಟಿ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮುಂದಿನ ಅವಧಿಗೆ ೨೦೨೫ ಸೆಪ್ಟೆಂಬರ್ ೭ ರ ಭಾನುವಾರದಂದು ಚುನಾವಣೆ ದಿನಾಂಕ ನಿಗದಿಯಾಗಿತ್ತು. ಹದಿಮೂರು ನಿರ್ದೇಶಕರ ಸ್ಥಾನಕ್ಕೆ ಒಟ್ಟು ೩೪ ಅಭ್ಯರ್ಥಿಗಳು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ೧೩ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು.ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮುಂದಿನ ಅವಧಿಗೆ ೨೦೨೫ ಸೆಪ್ಟೆಂಬರ್ ೭ ರ ಭಾನುವಾರದಂದು ಚುನಾವಣೆ ದಿನಾಂಕ ನಿಗದಿಯಾಗಿತ್ತು. ಹದಿಮೂರು ನಿರ್ದೇಶಕರ ಸ್ಥಾನಕ್ಕೆ ಒಟ್ಟು ೩೪ ಅಭ್ಯರ್ಥಿಗಳು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ನಾಮಪತ್ರ ವಾಪಸ್ ಪಡೆಯಲು ಸೆಪ್ಟೆಂಬರ್ ೧ ಕೊನೆಯ ದಿನವಾಗಿತ್ತು. ಹಾಲಹಳ್ಳಿ ಅಶೋಕ್ ಹಾಗೂ ಹಿರಿಯ ವಕೀಲರಾದ ಬಿ.ಟಿ.ನಾಗರಾಜು ಪ್ರತ್ಯೇಕವಾಗಿ ಎರಡು ಸಿಂಡಿಕೇಟ್ ಮಾಡಿಕೊಂಡು ಚುನಾವಣೆಗೆ ಅಣಿಯಾಗಿದ್ದರು. ಕಡೇ ಘಳಿಗೆಯಲ್ಲಿ ಮಾತುಕತೆ ಮೂಲಕ ಬಿ.ಟಿ.ನಾಗರಾಜು ತಂಡದ ೬ ಹಾಗೂ ಹಾಲಹಳ್ಳಿ ಅಶೋಕ್ ತಂಡದ ೭ ಸ್ಥಾನಗಳನ್ನು ಹಂಚಿಕೆ ಮಾಡುವ ಮೂಲಕ ಚುನಾವಣೆಗೆ ಅಂತ್ಯ ಹಾಡಲಾಯಿತು.ಹದಿಮೂರು ಮಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ, ಪ್ರತಿಸ್ಪರ್ಧಿಗಳಿಲ್ಲದ ಕಾರಣ ಉಳಿದ ಹದಿಮೂರು ಮಂದಿಯನ್ನು ಚುನಾವಣಾಧಿಕಾರಿ ರವಿ ಅವರು ಮುಂದಿನ ೫ ವರ್ಷದ ಅವಧಿಗೆ ಮಂಡ್ಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಸಾಮಾನ್ಯ ಕ್ಷೇತ್ರದಿಂದ ಎಚ್.ಸಿ.ಅನಿಲ್‌ರಾಜ್, ಎಚ್.ಅಶೋಕ್, ಎನ್.ನಾಗೇಶ್, ಎಂ.ಮಹೇಶ್, ಪಿ.ಎಂ.ರಾಘವೇಂದ್ರ, ಬಿ.ಸಿ.ಸುರೇಶ, ಸಿ.ಸುಂದರ್ ಅವಿರೋಧ ಆಯ್ಕೆಯಾದರು.ಉಳಿದಂತೆ ತಿರುಮಲಾಚಾರಿ (ಹಿಂದುಳಿದ ವರ್ಗ ಪ್ರವರ್ಗ ಎ-ಮೀಸಲು), ಎನ್.ಶಶಿಧರ್ (ಹಿಂದುಳಿದ ವರ್ಗ ಪ್ರವರ್ಗ- ಬಿ. ಮೀಸಲು), ಡಿ.ಬಿ.ಪ್ರಮೀಳಾ ಹಾಗೂ ಸಿ.ಲತಾ (ಮಹಿಳಾ ಮೀಸಲು), ಬಿ.ಜೆ.ಸೋಮಶೇಖರ್ (ಪರಿಶಿಷ್ಟ ಪಂಗಡ), ಜನಾರ್ಧನಸ್ವಾಮಿ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.