ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ ಆಸ್ಪತ್ರೆಯ ಒಂದಲ್ಲಾ ಒಂದು ಅವಾಂತರಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅದೇ ರೀತಿ ಹೆರಿಗೆ ವಾರ್ಡ್ ಬಳಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಕೇಂದ್ರಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವುದನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲಾಧಿಕಾರಿ, ಉಪ ಲೋಕಾಯುಕ್ತರು, ನ್ಯಾಯಾಧೀಶರು, ಆಹಾರ ನಿಗಮದ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿ ಹಲವಾರು ಅವ್ಯವಸ್ಥೆಗಳನ್ನು ಗುರುತಿಸಿ ಹೋಗಿದ್ದಾರೆ. ಆ ಲೋಪಗಳನ್ನು ಸರಿಪಡಿಸಿಕೊಳ್ಳುವಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಇದು ಮಂಡ್ಯ ಜಿಲ್ಲಾಸ್ಪತ್ರೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಹಲವರು ಟೀಕಿಸಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ನಿತ್ಯ ಸಾವಿರಾರು ರೋಗಿಗಳು ಬರುತ್ತಿದ್ದಾರೆ. ಹೆರಿಗೆಗೆ ನಿರಂತರವಾಗಿ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಆದರೆ, ದೊಡ್ಡಾಸ್ಪತ್ರೆಗೆ ಬರುವ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗದಷ್ಟು ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದ್ದಾರೆ.ಆಸ್ಪತ್ರೆಯ ಆವರಣದಲ್ಲಿರುವ ವಾಟರ್ ಟ್ಯಾಂಕ್‌ನ್ನು ಹತ್ತು ವರ್ಷಗಳಿಂದ ಶುಚಿಗೊಳಿಸಿಲ್ಲ. ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ವಾಟರ್ ಪ್ಯೂರಿಫೈಯರ್‌ಗಳು ಕೆಟ್ಟು ಹಾಳಾಗಿದ್ದರೂ ಇದುವರೆಗೂ ಮಿಮ್ಸ್ ನಿರ್ದೇಶಕರಾಗಲೀ, ಮಿಮ್ಸ್ ವೈದ್ಯಕೀಯ ಅಧೀಕ್ಷಕರಾಗಲೀ ಅತ್ತ ತಿರುಗಿನೋಡಿಲ್ಲ. ಆಸ್ಪತ್ರೆಯ ರೋಗಿಗಳು, ಸಂಬಂಧಿಕರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೂ ದಿವ್ಯಮೌನ ವಹಿಸಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಆಪಾದಿಸಿದರು.
ಕೃಷಿಕ ಲಯನ್ಸ್ ಸಂಸ್ಥೆ ಮತ್ತು ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಆಸ್ಪತ್ರೆಗೆ ಬರುವ ಜನರಿಗೆ ಅನುಕೂಲವಾಗಲೆಂದು ವಾಟರ್ ಫಿಲ್ಟರ್, ವಾಟರ್ ಪ್ಯೂರಿಫೈಯರ್‌ಗಳನ್ನು ಕೊಡುಗೆಯಾಗಿ ನೀಡಿದ್ದರು. ಹಲವು ವರ್ಷಗಳಿಂದ ಆಸ್ಪತ್ರೆಯ ನೀರಿನ ಟ್ಯಾಂಕ್‌ನ್ನೂ ಸ್ವಚ್ಛಗೊಳಿಸಿಲ್ಲ. ಇದರ ಪರಿಣಾಮ ಆಸ್ಪತ್ರೆಯ ನಲ್ಲಿಗಳ ಮೂಲಕ ಪಾಚಿ ಕಟ್ಟಿದ ಕೊಳಚೆ ನೀರು ಸರಬರಾಜಾಗುತ್ತಿದೆ. ಕಾಲಕಾಲಕ್ಕೆ ಫಿಲ್ಟರ್ ಬದಲಾವಣೆ ಮಾಡದ ಕಾರಣ ಮಲಿನಗೊಂಡ ನೀರು ಪೂರೈಕೆಯಾಗುತ್ತಾ ಜನರನ್ನು ಇನ್ನಷ್ಟು ರೋಗಗ್ರಸ್ಥರನ್ನಾಗಿ ಮಾಡುತ್ತಿದೆ ಎಂದು ದೂರಿದ್ದಾರೆ.ಗರ್ಭಿಣಿಯರು, ಬಾಣಂತಿಯರ ಅನುಕೂಲಕ್ಕಾಗಿ ದಾನಿಗಳು, ಸಂಘ-ಸಂಸ್ಥೆಯವರು ನೀಡಿರುವ ವಾಟರ್‌ಫಿಲ್ಟರ್‌ಗಳನ್ನು ಸಮರ್ಪಕ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಫಿಲ್ಟರ್ ಬದಲಾವಣೆ ಮಾಡದ ಮಿಮ್ಸ್ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕೂಡಲೇ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ವಾಟರ್ ಟ್ಯಾಂಕ್‌ನ್ನು ಶುಚಿತಗೊಳಿಸುವುದು, ವಾಟರ್‌ಫಿಲ್ಟರ್ ಮತ್ತು ವಾಟರ್ ಫ್ಯೂರಿಫೈಯರ್‌ಗಳಲ್ಲಿರುವ ಫಿಲ್ಟರ್ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.ಒಂದು ವಾಟರ್ ಫಿಲ್ಟರ್‌ನಲ್ಲಿ ಕೊಳಕು ನೀರು ಬರುತ್ತಿದ್ದರೆ, ಮತ್ತೊಂದರಲ್ಲಿ ಹುಳಗಳು ಹಾಗೂ ಹುಳುಗಳ ಮೊಟ್ಟೆ ಇರುವ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇವೆರಡರಲ್ಲೂ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿದೆ. ಆದರೂ ವೈದ್ಯಾಧಿಕಾರಿಗಳು ಇತ್ತ ತಿರುಗಿನೋಡಿಲ್ಲವೆಂದು ಆರೋಪಿಸಿದ್ದಾರೆ.ಮಿಮ್ಸ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕುಲಗೆಟ್ಟು ಹಾಳಾಗಿದೆ. ಗರ್ಭಿಣಿ, ಬಾಣಂತಿಯರು, ಸಂಬಂಧಿಕರಿಗೆ ವಾಟರ್ ಫಿಲ್ಟರ್‌ಗಳಿಂದ ಕಲುಷಿತ ನೀರನ್ನು ಪೂರೈಸಲಾಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರು ಜನರಿಗೆ ಸರಬರಾಜಾಗುತ್ತಿದ್ದರೂ ವೈದ್ಯಾಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಅವರಿಗೆ ಜನಹಿತ ಬೇಕಾಗಿಲ್ಲ. ತಕ್ಷಣವೇ ಟ್ಯಾಂಕ್ ಸ್ವಚ್ಛಗೊಳಿಸಿ, ಫಿಲ್ಟರ್‌ಗಳನ್ನು ಬದಲಾಯಿಸಿ ಶುದ್ಧ ನೀರು ಒದಗಿಸಲು ಮುಂದಾಗಬೇಕು.
- ಶ್ರೀನಿವಾಸ್, ಗೋಪಾಲಪುರ, ಮಂಡ್ಯ ತಾಲೂಕುನಾವು ಚನ್ನಪಟ್ಟಣದಿಂದ ಬಂದಿದ್ದೇವೆ. ವಾಟರ್ ಫಿಲ್ಟರ್‌ಗಳಲ್ಲಿ ಕೊಳಕು ನೀರು ಬರುತ್ತಿದೆ. ಅದನ್ನು ಕುಡಿಯುವುದಕ್ಕೆ ಹೇಗೆ ಸಾಧ್ಯ. ಗರ್ಭಿಣಿಯರು, ಬಾಣಂತಿಯರು ಈ ನೀರನ್ನು ಕುಡಿದು ಬದುಕಲು ಸಾಧ್ಯವಿದೆಯೇ. ನಾವು ಬಡವರು, ಹೊರಗಿನಿಂದ ನೀರು ತರಬೇಕೆಂದರೆ ೨೦ ರು.ವರೆಗೆ ಖರ್ಚಾಗುತ್ತದೆ. ಆದರೆ, ಈಗ ಅನಿವಾರ್ಯವಾಗಿರುವುದರಿಂದ ಹೊರಗಿನಿಂದ ನೀರನ್ನು ಕೊಂಡು ತರುತ್ತಿದ್ದೇವೆ.- ರಿಜ್ವಾನ, ಚನ್ನಪಟ್ಟಣ, ರಾಮನಗರ ಜಿಲ್ಲೆ