ಸಾರಾಂಶ
ಕೊಪ್ಪಳ: ವಿಕಲಚೇತನರಾಗಿದ್ದುಕೊಂಡು ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರ ಅಂಗವೈಕಲ್ಯ ಅಡಿಯಾಗದು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಹೇಳಿದರು.ನಗರದ ಸರ್ದಾರಗಲ್ಲಿ ಉರ್ದು ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಆ ವ್ಯಕ್ತಿ ಅಂಗಾಂಗಗಳು ಮುಖ್ಯವಲ್ಲ, ಮುಖ್ಯವಾಗಿರಬೇಕಾಗಿರುವುದು ಆಸಕ್ತಿ. ವಿಕಲಚೇತನ ಮಕ್ಕಳು ಕೂಡ ತಮ್ಮಲ್ಲಿರುವ ಅಂಗವೈಕಲ್ಯತೆಯ ಕಡೆಗೆ ಗಮನ ಕೊಡಬಾರದು ಎಂದರು.ಸಾಧನೆ ಮಾಡಬೇಕಾದರೆ ಅಂಗವಿಕಲತೆಯು ಯಾವುದೇ ಕಾರಣಕ್ಕೂ ಅಡಿಯಾಗದು. ಅಂಗವೈಕಲ್ಯತೆ ಮೆಟ್ಟಿನಿಂತು ಕೂಡ ಅನೇಕರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇದ್ದು, ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ವಿಕಲಚೇತನರ ಮಕ್ಕಳ ಪಾಲಕರು ತಮ್ಮ ವಿಕಲಚೇತನ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷವಾದ ಗಮನ ಹರಿಸಬೇಕು ಎಂದರು.ರಾಜ್ಯದಲ್ಲಿ ವಿಕಲಚೇತನರ ಮಕ್ಕಳ ವಿವಿಧ ಅಂಗವೈಕಲ್ಯತೆಗೆ ಅನುಗುಣವಾಗಿ ಶಾಲೆಗಳಿವೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೊಡಿಸಬೇಕಿದೆ. ರಾಜ್ಯ ಮಟ್ಟದ ವಿಕಲಚೇತನ ಮಕ್ಕಳ ಕ್ರೀಡಾಕೂಟವು ಮಧುಗಿರಿಯಲ್ಲಿ ಪ್ರತಿ ವರ್ಷ ಜರುಗುತ್ತಿದ್ದು ಮುಂದಿನ ವರ್ಷ ನಮ್ಮ ಜಿಲ್ಲೆಯಲ್ಲಿ ನಡೆಸುವ ಕುರಿತಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ವಿಠ್ಠಲ ಜಾಗವಾಡ ಮಾತನಾಡಿ, ವಿಕಲಚೇತನರಿಗಾಗಿ ಸರ್ಕಾರವು ಅನೇಕ ರೀತಿಯ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅಂತಹ ಸೌಲಭ್ಯಗಳು ಸರಿಯಾದ ವಿಕಲಚೇತನರಿಗೆ ಸಿಗುವಂತಾಗಬೇಕು. ವಿಕಲಚೇತನರ ಬಗ್ಗೆ ಅನುಕಂಪ ಪಡದೇ ಅವರಿಗೆ ಅವಕಾಶ ಒದಗಿಸಿ ಕೊಡುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದು ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹೋಳಿಬಸಯ್ಯ ಮಾತನಾಡಿ, ವಿಕಲಚೇತನ ಮಕ್ಕಳು ಅಂಗವೈಕಲ್ಯತೆ ಒಳಗೊಂಡಿದ್ದರೂ ಅವರ ಬಳಿ ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚಿನ ಸಾಮರ್ಥ ಹೊಂದಿರುತ್ತಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿಕಲಚೇತನ ಮಕ್ಕಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಎ. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಶಿಕ್ಷಕರ ಸಂಘದ ನಿರ್ದೇಶಕ ನಫೀಜಖಾನ ಪಠಾಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಬಾಗೋಡಿ, ಅನ್ನಪೂರ್ಣ ಅಸ್ಕಿ, ಶರಣಪ್ಪ ವೀರಾಪುರ, ಬಸವನಗೌಡ ಇದ್ದರು.ದೈಹಿಕ ಶಿಕ್ಷಕ ಬಸವರಾಜ ಹನುಮಸಾಗರ ನಿರೂಪಿಸಿದರು. ಸಮನ್ವಯ ಶಿಕ್ಷಣದ ಶಿಕ್ಷಕ ಲಕ್ಷ್ಮಪ್ಪ ಪಲ್ಲೇದ ಸ್ವಾಗತಿಸಿದರು. ಬಲರಾಮ ಪೂಜಾರ ವಂದಿಸಿದರು.