ಅಂಗವಿಕಲರಿಗಿದೆ ಸಂವಿಧಾನಬದ್ಧ ಹಕ್ಕು: ಹಿರಿಯ ನ್ಯಾಯಾಧೀಶೆ ಶಾರಾದಾದೇವಿ

| Published : Dec 09 2024, 12:46 AM IST

ಅಂಗವಿಕಲರಿಗಿದೆ ಸಂವಿಧಾನಬದ್ಧ ಹಕ್ಕು: ಹಿರಿಯ ನ್ಯಾಯಾಧೀಶೆ ಶಾರಾದಾದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ, ಸರ್ಕಾರ ನೀಡುವ ಸೌಲಭ್ಯ ಅಂಗವಿಕಲರಿಗೆ ತಲುಪಲು ಅಜಿತ ಮನೋಚೇತನದಂಥ ಮಾದರಿ ಸೇವಾ ಸಂಸ್ಥೆಗಳು ಗಣನೀಯ ಕಾರ್ಯ ನಡೆಸುತ್ತಿವೆ.

ಶಿರಸಿ: ಅಂಗವಿಕಲರಿಗೆ ಸಂವಿಧಾನಬದ್ಧ ಹಕ್ಕುಗಳಿವೆ. ಸಮಾಜ, ಸರ್ಕಾರ ನೀಡುವ ಸೌಲಭ್ಯ ಅಂಗವಿಕಲರಿಗೆ ತಲುಪಲು ಅಜಿತ ಮನೋಚೇತನದಂಥ ಮಾದರಿ ಸೇವಾ ಸಂಸ್ಥೆಗಳು ಗಣನೀಯ ಕಾರ್ಯ ನಡೆಸುತ್ತಿವೆ. ಮಾತೃ ಹೃದಯ ಎಲ್ಲರಲ್ಲಿ ಇರಲಿ. ಕಾನೂನು ಸೇವಾ ಸಮಿತಿ ಮೂಲಕ ಸಾಧ್ಯವಾದ ಸೇವೆ ನೀಡಲು ಪೂರ್ಣ ಪ್ರಯತ್ನ ನಡೆಸುತ್ತೇವೆ ಎಂದು ಶಿರಸಿಯ ಹಿರಿಯ ನ್ಯಾಯಾಧೀಶೆ ಶಾರಾದಾದೇವಿ ತಿಳಿಸಿದರು.ನಗರದ ಮರಾಠಿಕೊಪ್ಪ ಅಜಿತ ಮನೋಚೇತನಾ ಸಂಸ್ಥೆಯಲ್ಲಿ ಅಂಗವಿಕಲರ ದಿನಾಚರಣೆ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.ವಾರ್ತಾಪತ್ರವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶೃತಿ ಬಿಡುಗಡೆ ಮಾಡಿದರು. ಕ್ರೀಡಾ ಸಮವಸ್ತ್ರವನ್ನು ರಾಜ್ಯ ಸ್ಪೇಶಲ್ ಒಲಿಂಪಿಕ್ಸ್ ನಿರ್ದೇಶಕ ಅಮರೇಂದ್ರ ವಿತರಿಸಿದರು. ಶಿರಸಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವೀಣಾ ಸಿರ್ಸಿಕರ ಅವರು ಪೌಷ್ಟಿಕ ಆಹಾರವನ್ನು ವಿಶೇಷ ಮಕ್ಕಳಿಗೆ ಇಲಾಖೆಯಿಂದ ನೀಡಲು ಮುಂದಾಗುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ವಾರ್ತಾಪತ್ರ ಸಂಪಾದಕ ಡಾ. ಕೇಶವ ಕೊರ್ಸೆ ಅವರನ್ನು ಅಭಿನಂದಿಸಿದರು. ಸ್ಪೇಶಲ್ ಒಲಿಂಪಿಕ್ಸ್ ವಿವರಗಳನ್ನು ಶಾಂತಲಾ ಸುರೇಶ ರಾಜ್ಯ ಸ್ಪೇಶಲ್ ಒಲಿಂಪಿಕ್ಸ್ ಸಮಿತಿಯವರು ನೀಡಿದರು.

ಜಿಲ್ಲಾ ಒಲಿಂಪಿಕ್ಸ್ ಸಮಿತಿಯನ್ನು ಅನಂತ ಹೆಗಡೆ ಆಶೀಸರ್ ಪ್ರಕಟಿಸಿದರು. ರೂಪ್‌ಸಿಂಗ್(ರಾಜ್ಯ ಸಮಿತಿ ಉಪಾಧ್ಯಕ್ಷರು) ಅವರು ರಾಜ್ಯಮಟ್ಟದ ಸ್ಪೇಶಲ್ ಒಲಿಂಪಿಕ್ಸ್ ಜನವರಿ ೪ನೇ ವಾರ ಮೂಡಬಿದರೆಯಲ್ಲಿ ನಡೆಯಲಿದೆ ಎಂದರು.

ಜಿಲ್ಲೆಯ ಸ್ಪೇಶಲ್ ಒಲಿಂಪಿಕ್ಸ್ ಜನವರಿ ೨ನೇ ವಾರ ಶಿರಸಿಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸುಧೀರ ಭಟ್ ತಿಳಿಸಿದರು. ನರ್ಮದಾ ಹೆಗಡೆ ವಂದಿಸಿದರು. ಜಿಲ್ಲೆಯ ಕುಮಟಾ, ಯಲ್ಲಾಪುರ, ಭಟ್ಕಳ, ಹೊನ್ನಾವರ, ಯಲ್ಲಾಪುರ ತಾಲೂಕಿನ ೩೦ ವಿಶೇಷ ಶಿಕ್ಷಕರು ಭಾಗವಹಿಸಿದ್ದರು. ಎಂ.ಆರ್.ಡಬ್ಲ್ಯು ಸ್ನೇಹಾ, ಉದಯ ಸ್ವಾದಿ, ಗಣಪತಿ ಹೆಗಡೆ ಬಿಸಲಕೊಪ್ಪ, ವಿನಾಯಕ ಎಂ. ಭಟ್, ಜಿ.ವಿ. ಹೆಗಡೆ ಉಪಸ್ಥಿತರಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಿರಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರವು ತಾಲೂಕಿನ ಹನುಮಂತಿ ಗ್ರಾಮದ ಸಭಾಭವನದಲ್ಲಿ ಭಾನುವಾರ ನಡೆಯಿತು.ತಾಲೂಕು ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ಶಿಬಿರದ ಉದ್ಘಾಟಿಸಿ, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರ ಜತೆ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಗ್ರಾಮ, ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ, ಕಣ್ಣಿನ ತಪಾಸಣಾ ಕಾರ್ಯಕ್ರಮಗಳು, ಮಾಸಾಶನ, ಸಹಾಯಧನ, ವಾತ್ಸಲ್ಯ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ, ಜನಮಂಗಳ, ಕೃಷಿ ಅನುದಾನದಂಥ ಹಲವಾರು ಕಾರ್ಯಕ್ರಮಗಳನ್ನು ಯೋಜನೆಯ ಅಡಿಯಲ್ಲಿ ಮಾಡುತ್ತಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಹನುಮಂತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಕುಮಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಅಭಿವೃದ್ಧಿಯ ಜತೆಗೆ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಯೋಜನೆಯ ಕಾರ್ಯಗಳು ಶ್ಲಾಘನೀಯವಾಗಿದೆ ಎಂದರು.

ಹುಣಸೆಕೊಪ್ಪ ಗ್ರಾಪಂ ಅಧ್ಯಕ್ಷೆ ಹೇಮಾವತಿ ಗೌಡ ಹಾಗೂ ಒಕ್ಕೂಟದ ಅಧ್ಯಕ್ಷ ದತ್ತಾತ್ರೇಯ ಗೌಡ ಮಾತನಾಡಿದರು. ಶಿರಸಿ ಐಕ್ಯೂರ್ ಸಂಸ್ಥೆಯ ಅಯೋಜಕಿ ಗಾಯತ್ರಿ, ವೀಣಾ, ಎಲ್.ಇ. ಪಲ್ಲವಿ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು. ಜ್ಞಾನವಿಕಾಸದ ತಾಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ನಿರೂಪಿಸಿ, ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸಾವಿತ್ರಿ ವಂದಿಸಿದರು.