ಸಾರಾಂಶ
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಕಲಚೇತನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅವುಗಳ ಬಗ್ಗೆ ವಿಕಲ ಚೇತನರಿಗೆ ಸರಿಯಾಗಿ ಮಾಹಿತಿ ನೀಡಬೇಕು. ವಿಕಲಚೇತನ ಫಲಾನುಭವಿಗಳು ಕಾರ್ಯಕ್ರಮಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಜಿ.ಕುಮಾರ್ ನಾಯಕ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಕಲಚೇತನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅವುಗಳ ಬಗ್ಗೆ ವಿಕಲ ಚೇತನರಿಗೆ ಸರಿಯಾಗಿ ಮಾಹಿತಿ ನೀಡಬೇಕು. ವಿಕಲಚೇತನ ಫಲಾನುಭವಿಗಳು ಕಾರ್ಯಕ್ರಮಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಜಿ.ಕುಮಾರ್ ನಾಯಕ ಸಲಹೆ ನೀಡಿದರು.ಸ್ಥಳೀಯ ರಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಸಂಯುಕ್ತ ಪ್ರಾದೇಶಿಕ ಕೇಂದ್ರ, ಕೌಶಲ್ಯಾವೃದ್ಧಿ ಪುನರ್ವಸತಿ ಮತ್ತು ವಿಕಲಚೇತನರ ಸಬಲೀಕರಣ, ದಾವಣಗೆರೆ ನೈಪಿಡ್, ವೈದ್ಯಕೀಯ ಮೆಡಿಕಲ್ ಕಾಲೇಜು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇರಳೆ ಮೇಳ ಹಾಗೂ ವಿಕಲಚೇತನರಿಗೆ ಉದ್ಯೋಗ ಮೇಳ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ವೃತ್ತಿಪರ ತರಬೇತಿ, ಉದ್ಯೋಗ, ಸಾಮಾಜಿಕ ಭದ್ರತೆ, ಸಮಾನ ಹಕ್ಕುಗಳನ್ನು ಒದಗಿಸಿ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ವಿಕಲಚೇತನರಿಗಾಗಿ ಸರ್ಕಾರ ಜಾರಿ ತಂದಿದೆ. ವಿಕಲಚೇತನರಿಗೆ ಶೈಕ್ಷಣಿಕ ಸೌಲಭ್ಯ, ಉದ್ಯೋಗಾವಕಾಶ ಮತ್ತು ತರಬೇತಿ ಒದಗಿಸುವುದರ ಜತೆಗೆ ಅವಶ್ಯಕ ಸಾಧನ ಸಲಕರಣೆ ಪೂರೈಕೆ ಮಾಡುವ ಮೂಲಕ ಸಮಾಜದಲ್ಲಿ ಘನತೆ, ಗೌರವದಿಂದ ಬಾಳಲು ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದರು.
ರಿಮ್ಸ್ ಸಂಸ್ಥೆಯ ಮನೋವೈದ್ಯ ಡಾ.ರಮೇಶ ಬಾಬು ಮಾತನಾಡಿದರು. ಈ ವೇಳೆ ಮುಖಂಡರು, ಆಯೋಜಕರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸೇರಿ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರು ಇದ್ದರು.ವಿಕಲಚೇತನರ ಸಾಧನ ಸಲಕರಣೆಗಳ ಪ್ರದರ್ಶನ
ಮೇಳದಲ್ಲಿ ದಿವ್ಯಾಂಗರ ಕೌಶಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣ ಸಂಯುಕ್ತ ದಾವಣಗೆರೆಯ ಪ್ರಾದೇಶಿಕ ಕೇಂದ್ರ, ಬೆಂಗಳೂರಿನ ಸಿಬಿಎಮ್ ಇಂಡಿಯಾ ಟ್ರಸ್ಟ್, ಸಾಮರ್ಥ್ಯ, ಔಟ್ ಬ್ಯಾಂಕ್, ರಾಯಚೂರಿನ ಮಾಣಿಕ್ಯಪ್ರಭು ಅಕಾಡೆಮಿ ಫಾರ್ ದಿ ಬ್ಲೈಡ್, ಸೌರ ಸ್ಕೆಲ, ರಾಯಚೂರಿನ ಎಪಿಡಿ ಸಂಸ್ಥೆಗಳು ಸೇರಿದಂತೆ ಸುಮಾರು 15 ಸಂಸ್ಥೆಗಳು ಪಾಲ್ಗೊಂಡು ವಿಕಲಚೇತನರ ಹಾಗೂ ಹಿರಿಯ ನಾಗರೀಕರಿಗೆ ಬೇಕಾಗುವ ಸಲಕರಣೆಗಳ ಕುರಿತು ವಸ್ತು ಪ್ರದರ್ಶನ ಹಾಗೂ ಮಾಹಿತಿ ನೀಡಲಾಯಿತು. ಮೇಳದಲ್ಲಿ ಸುಮಾರು 523 ಜನರು ನೋಂದಣಿಯಾಗಿದ್ದರು.