ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಎರಡು ಕಾಲುಗಳಿಲ್ಲದಿದ್ದರೂ ನರೇಗಾದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗುವ ಮೂಲಕ ಜೀವನದಲ್ಲಿ ಹೊಸ ಭರವಸೆ ಕಂಡುಕೊಂಡಿದ್ದಾರೆ ತಾಲೂಕಿನ ಗೋತಗಿ ಗ್ರಾಮದ ಅಂಗವಿಕಲ ಯುವಕ ವಿಶ್ವನಾಥ ಬಡಿಗೇರ.ತಾಲೂಕಿನ ಕ್ಯಾದಿಗುಪ್ಪ ಗ್ರಾಪಂ ವ್ಯಾಪ್ತಿಯ ಗೋತಗಿ ಗ್ರಾಮದ ವಿಶ್ವನಾಥ ಚಿದಾನಂದಪ್ಪ ಬಡಿಗೇರ ಎಂಬ 30 ವರ್ಷದ ಯುವಕ ಹುಟ್ಟಿನಿಂದಲೆ ಅಂಗವಿಕಲನಾಗಿದ್ದು, ದೈಹಿಕ ಸವಾಲು, ಬಡತನ, ಕುಟುಂಬ ಆರ್ಥಿಕ ಸಂಕಷ್ಟ ಮತ್ತು ತಂದೆ-ತಾಯಿಯ ಅನಾರೋಗ್ಯ... ಹೀಗೆ ಅನೇಕ ಕಷ್ಟ ಮೆಟ್ಟಿ ನಿಂತು ಜೀವನದಲ್ಲಿ ಬರುವ ಎಲ್ಲ ಸವಾಲು ಎದುರಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.
ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಯುವಕ ಬಡಕುಟುಂಬದಲ್ಲಿ ಜನಿಸಿರುವುದು ಒಂದೆಡೆಯಾದರೆ ಹುಟ್ಟಿನಿಂದಲೆ ಬಂದ ಅಂಗವೈಕಲ್ಯ ಸವಾಲಾಗಿ ಬಂತು.ಜೀವನೋಪಾಯಕ್ಕಾಗಿ ಬೆಂಗಳೂರ ನಗರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಸಿಕ ₹9000 ಸಂಬಳವಿದ್ದರೂ ಬಾಡಿಗೆ ಮತ್ತು ಊಟದ ವೆಚ್ಚಗಳ ನಂತರ ಉಳಿಯುತ್ತಿದ್ದ ಹಣ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ತಮ್ಮ ಸ್ವಗ್ರಾಮಕ್ಕೆ ಮರಳಿದರು. ಕೂಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿ ಅನಾರೋಗ್ಯಕ್ಕೆ ಈಡಾದರು. ಮನೆಯ ಜವಾಬ್ದಾರಿ ಸಂಪೂರ್ಣ ವಿಶ್ವನಾಥ್ ಮೇಲೆ ಬಿದ್ದಿತು. ನಿರಾಶರಾಗದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಆರಂಭಿಸಿದ ಅವರು, ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರು ಒದಗಿಸುವುದು ಹಾಗೂ ತನ್ನ ಕೈಲಾದ ಕೆಲಸ ನಿರ್ವಹಿಸುವ ಮೂಲಕ ಯೋಜನೆಯಿಂದ ದೊರೆಯುವ ಆದಾಯ ಮನೆ ಖರ್ಚು ಹಾಗೂ ತಂದೆ-ತಾಯಿ ಆರೈಕೆಗೆ ಬಳಸುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಮೆಚ್ಚುಗೆಗೆ ಪಾತ್ರ: ನರೇಗಾ ಕೆಲಸ ಇರಲಾರದ ಸಂದರ್ಭ ಗ್ರಾಮದ ಅನಕ್ಷರಸ್ಥರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಇತರ ಸರ್ಕಾರಿ ದಾಖಲೆ ಮಾಡಿಸಿಕೊಡುವ ಸೇವೆ ಸಲ್ಲಿಸುತ್ತಿದ್ದು, ಆದರಿಂದಲೂ ಸ್ವಲ್ಪ ಆದಾಯ ಗಳಿಸುತ್ತಿದ್ದಾರೆ. ಶ್ರಮ, ಸೇವಾ ಮನೋಭಾವ ಮೂಲಕ ಕುಟುಂಬ ಮುನ್ನಡೆಸುತ್ತಿರುವ ವಿಶ್ವನಾಥ್ ಗ್ರಾಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ, ಆತ್ಮವಿಶ್ವಾಸವಿದ್ದರೆ ಯಾವುದೇ ಸಂಕಷ್ಟ ಜಯಿಸಬಹುದು ಎಂಬುದನ್ನು ವಿಶ್ವನಾಥ ಬಡಿಗೇರ ಜೀವನ ಸ್ಪಷ್ಟವಾಗಿ ತೋರಿಸುತ್ತದೆ. ಉದ್ಯೋಗ ಖಾತ್ರಿ ಯೋಜನೆ ಬದುಕಿಗೆ ಕೇವಲ ಉದ್ಯೋಗವನ್ನಷ್ಟೇ ಅಲ್ಲ, ಆತ್ಮಗೌರವ ಬದುಕಿಗೆ ಭದ್ರ ಅಡಿಪಾಯ ಒದಗಿಸಿದೆ ಎನ್ನಬಹುದಾಗಿದೆ.
ಆತ್ಮವಿಶ್ವಾಸದಿಂದ ಬದುಕಲು ಅವಕಾಶ: ವಿಶ್ವನಾಥ ಅವರಂತಹ ಫಲಾನುಭವಿಗಳು ನರೇಗಾ ಯೋಜನೆ ನಿಜವಾದ ಉದ್ದೇಶ ಸಾಕಾರಗೊಳಿಸುತ್ತಿದ್ದಾರೆ. ಅಂಗವೈಕಲ್ಯ ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ಸ್ವಾಭಿಮಾನದಿಂದ ದುಡಿದು ಕುಟುಂಬ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ. ನರೇಗಾ ಯೋಜನೆ ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಜತೆಗೆ ಆತ್ಮವಿಶ್ವಾಸದಿಂದ ಬದುಕಲು ಅವಕಾಶ ಕಲ್ಪಿಸುತ್ತಿದೆ ಎಂದು ಕುಷ್ಟಗಿ ಇಒ ತಾಪಂ ಅಮರೇಶ ಹೇಳಿದರು.ಪ್ರೇರಣೆ: ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ದುರ್ಬಲ ವರ್ಗದ ಜನರಿಗೆ ಜೀವನೋಪಾಯದ ಭದ್ರತೆ ನೀಡುವ ಮಹತ್ವದ ಯೋಜನೆಯಾಗಿದೆ. ವಿಶ್ವನಾಥ ಬಡಿಗೇರ ಯೋಜನೆ ಸದುಪಯೋಗ ಪಡೆದು ಕುಟುಂಬಕ್ಕೆ ಆಸರೆಯಾಗಿರುವುದು ಸಂತಸದ ಸಂಗತಿಯಾಗಿದ್ದು, ಉಳಿದ ಫಲಾನುಭವಿಗಳಿಗೂ ಪ್ರೇರಣೆಯಾಗಿದ್ದಾರೆ ಎಂದು ಕುಷ್ಟಗಿ ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.
ನಾನು ಹುಟ್ಟಿನಿಂದ ಎರಡು ಕಾಲು ಕಳೆದುಕೊಂಡಿದ್ದರೂ ಸಹಿತ ಜೀವನದಲ್ಲಿ ಬದುಕಬೇಕೆಂಬ ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿದ್ದೇನೆ. ನನ್ನ ತಂದೆ ತಾಯಿ ಆರೈಕೆ ಮಾಡುವ ಹೊಣೆ ನನ್ನದಾಗಿದ್ದು ನರೇಗಾ ಯೋಜನೆ ಬಹುದೊಡ್ಡ ಆಸರೆಯಾಗಿದೆ ಎಂದು ವಿಕಲಚೇತನ ಫಲಾನುಭವಿ ವಿಶ್ವನಾಥ ಬಡಿಗೇರ ಹೇಳಿದರು.