ಸಾರಾಂಶ
ಶಿಗ್ಗಾವಿ: ಧಾರವಾಡ ಲೋಕಸಭೆಯ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪ್ರಚಾರ ಭರಾಟೆ, ತಾಲೀಮು ರಂಗೇರುವ ಹೊತ್ತಲ್ಲಿಯೇ ಮಾಜಿ ಶಾಸಕ ಅಜ್ಜಂಪೀರ್ ಎಸ್. ಖಾದ್ರಿ ಹಾಗೂ ಕಾಂಗ್ರೆಸ್ ಮುಖಂಡ ಯಾಶೀರಖಾನ್ ಪಠಾಣ ಅವರ ಮಧ್ಯೆ ಭಿನ್ನಮತ ಭುಗಿಲೆದ್ದಿದೆ. ಪರಿಣಾಮ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ನೇತೃತ್ವದಲ್ಲಿ ನಡೆಯಬೇಕಿದ್ದ ಕೆಲ ಪ್ರಚಾರ ಸಭೆಗಳೇ ರದ್ದುಗೊಂಡಿವೆ.
ಕಳೆದ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಖಾದ್ರಿ ಅಮಾನತುಗೊಂಡು ವಿವಿಧ ಚಟುವಟಿಕೆಗಳಿಂದಲೇ ದೂರ ಉಳಿದಿದ್ದರು. ಇತ್ತೀಚಿಗಷ್ಟೇ ಪಕ್ಷದ ಅಮಾನತು ತೆರವುಗೊಂಡು ಲೋಕಸಭೆಯ ಅಭ್ಯರ್ಥಿ ಪರ ಪ್ರಚಾರಕ್ಕೆ ಸಭೆಗಳನ್ನು ಆಯೋಜಿಸತೊಡಗಿದ್ದರು.ಈ ಕುರಿತು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಮಿಕ ಸಚಿವ ಸಂತೋಷ ಲಾಡ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿ ಸಚಿವರ ಸೂಚನೆಯಂತೆ ಕೈ ಅಭ್ಯರ್ಥಿ ಪರ ಪ್ರಚಾರ ಶುರುವಿಟ್ಟುಕೊಂಡಿದ್ದರು. ತಾಲೂಕಿನ ವಿವಿಧ ಗ್ರಾಮಗಳ ಕಾರ್ಯಕರ್ತರನ್ನು ಸಂಘಟಿಸಿ ಪೋನ್ ಮೂಲಕ ಸಂಪರ್ಕಿಸಿ ಸನ್ನದ್ಧಗೊಳಿಸಿದ್ದರು. ಮಂಗಳವಾರ ಬೆಳಗ್ಗೆ ತಾಲೂಕಿನ ತಿಮ್ಮಾಪೂರ, ಸುರಪಗಟ್ಟಿ, ಬೆಂಡಿಗೇರಿ, ಬೆಳವಲಕೊಪ್ಪ ಕ್ಯಾಲಕೊಂಡ, ಹುಲಗೂರು, ಕಾರಡಗಿ, ಸವಣೂರ ತಾಲೂಕಿನ ಕುರಬರಮಲ್ಲೂರು ಗ್ರಾಮಗಳ ಸಭೆಗೆ ಪೂರ್ಣ ಪ್ರಮಾಣದ ಸಿದ್ಧತೆಯೂ ಆಗಿತ್ತು.
ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಅನಿಲಕುಮಾರ ಪಾಟೀಲ. ಅಜ್ಜಂಪೀರ್ ಎಸ್. ಖಾದ್ರಿ, ಪ್ರೇಮಾ ಪಾಟೀಲ, ಪಕ್ಷದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ತಿಮ್ಮಾಪೂರ ಗ್ರಾಮದ ಪ್ರಚಾರ ವೇದಿಕೆಯಲ್ಲಿಯೇ ಜಮಾವಣೆಯಾಗಿದ್ದರು. ಪ್ರಚಾರ ಸಭೆಯ ನಂತರ ಹಿರೆಬೆಂಡಿಗೇರಿ ಗ್ರಾಮಕ್ಕೆ ತೆರಳಿ ಪ್ರಚಾರ ಸಭೆ ವೇದಿಕೆಗೆ ಬರುವ ಮೊದಲೇ ಅಜಂಪೀರ್ ಎಸ್ ಖಾದ್ರಿ ನೇತೃತ್ವದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗವಹಿಸಬಾರದು. ನಮ್ಮ ಆಕ್ಷೇಪಣೆಯನ್ನು ಪಾಲನೆ ಮಾಡದೇ ಹೋದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅಭ್ಯರ್ಥಿ ಅಸೂಟಿಯವರಿಗೆ ದೂರವಾಣಿ ಕರೆ ಮಾಡಿ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಹಿರೆಬೆಂಡಿಗೇರಿಯ ಪ್ರಚಾರ ಸಭೆಯನ್ನೇ ಮೊಟಕುಗೊಳಿಸಿ ಹುಲಗೂರು ಗ್ರಾಮಕ್ಕೆ ತೆರಳಿ ಅಜ್ಜಂಪೀರ್ ಖಾದ್ರಿಯವರ ಮನೆಯಲ್ಲಿಯೇ ಕುಳಿತು ಚರ್ಚೆ ನಡೆಸಿದರು. ಪ್ರಚಾರ ಸಭೆ ರದ್ದಾಗಿದ್ದರಿಂದ ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಆಕ್ರೋಶಗೊಂಡು ಅಭ್ಯರ್ಥಿ ಎದುರಿಗೆ ಗಲಾಟೆ ಶುರುವಿಟ್ಟುಕೊಂಡರು. ಯಾಶೀರ್‌ಖಾನ ಪಠಾಣ ವಿರುದ್ಧ ಘೋಷಣೆ ಕೂಗಿದರು.ನಂತರ ಮಾಜಿ ಶಾಸಕ ಖಾದ್ರಿ ಎಲ್ಲ ಕಾರ್ಯಕರ್ತರನ್ನು ಸಮಾಧಾನಪಡಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಾವುದೇ ಕಾರಣಕ್ಕೂ ಚುನಾವಣೆ ಮುಗಿಯುವವರಗೂ ಒಗ್ಗಟ್ಟಾಗಿರಬೇಕು. ನಮ್ಮ ವೈಮನಸ್ಸು ಪಕ್ಷದ ಅಭ್ಯರ್ಥಿ ಗೆಲುವಿಗೆ ವ್ಯತಿರಿಕ್ತ ಪರಿಣಾಮ ಬೀರಬಾರದು, ನಮ್ಮೆಲ್ಲಾ ಕಾರ್ಯಕರ್ತರು ಸಂಘಟನೆಯಿಂದ ದೂರ ಉಳಿಯಬಾರದು, ಒಂದೊಂದು ಮತವೂ ಚುನಾವಣೆಯಲ್ಲಿ ಅಮೂಲ್ಯ, ಎಲ್ಲರೂ ಒಗ್ಗೂಡಿ ಕಾರ್ಯಪ್ರವರ್ತರಾಗೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಧಾರವಾಡ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹಾಗೂ ಅನಿಲಕುಮಾರ ಪಾಟೀಲರಿಗೆ ಪ್ರಚಾರ ಸಭೆಯಲ್ಲಿದ್ದಾಗಲೇ ಅಜ್ಜಂಪೀರ್ ಖಾದ್ರಿಯವರ ನೇತೃತ್ವದ ಪ್ರಚಾರ ಸಭೆಯಲ್ಲಿ ಭಾಗವಹಿಸಬಾರದೆಂದು ಆಕ್ಷೇಪಣೆ ಬಂದಿತ್ತು ಎನ್ನಲಾಗಿದೆ. ನಂತರ ಷಣ್ಮುಖಪ್ಪ ಶಿವಳ್ಳಿ ಕುಂದಗೋಳದಿಂದ ಆಗಮಿಸಿ ಎಲ್ಲಾ ಕಾರ್ಯಕರ್ತರನ್ನು ಮನವೊಲಿಸಿ ಸಮಾಧಾನ ಪಡಿಸಿದರು. ಮಂಗಳವಾರ ಆಯೋಜನೆಗೊಂಡ ತಾಲೂಕಿನ. ಗ್ರಾಮೀಣ ಪ್ರದೇಶದ ಎಲ್ಲಾ ಕಾಂಗ್ರೆಸ್ ಪ್ರಚಾರ ಸಭೆಗಳನ್ನು ರದ್ದುಪಡಿಸಲಾಯಿತು. ನಾನು ಕೂಡಾ ತಾಲೂಕಿನ ವಿವಿಧ ಗ್ರಾಮಗಳ ಕಾರ್ಯಕರ್ತರ ಸಂಘಟಿಸಿ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಹೈಕಮಾಂಡ ಸೂಚನೆ ಸಿಕ್ಕಿತ್ತು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆಯಂತೆ ನಮ್ಮ ಅಭ್ಯರ್ಥಿಯೊಡನೆ ಪ್ರಚಾರ ಹಮ್ಮಿಕೊಂಡಿದ್ದೆವು. ನಮ್ಮೊಳಗಿನ ಸಮಸ್ಯೆ ಏನೇ ಇರಲಿ, ಅದು ಪಕ್ಷದ ಅಭ್ಯರ್ಥಿಗೆ ಚುನಾವಣೆಯ ಫಲಿತಾಂಶಕ್ಕೆ ತೊಂದರೆಯಾಗಬಾರದು. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೇಳುತ್ತಾರೆ.