ಸಾರಾಂಶ
ಜಯನಗರದ ಶಿವರಾತ್ರೀಶ್ವರ ಕೇಂದ್ರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಯೋಜಿಸಿದ್ದ ‘ಬಸವ ಜಯಂತಿ’ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಸವಾದಿ ಶರಣರ ವಚನ ಸಾಹಿತ್ಯ ಆತ್ಮಪ್ರಜ್ಞೆ, ಜಾಗೃತಿ ಹಾಗೂ ಮನಸ್ಸಿನ ದ್ವಂದ್ವಗಳನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಹೇಳಿದರು.ಸೋಮವಾರ ಜಯನಗರದ ಶಿವರಾತ್ರೀಶ್ವರ ಕೇಂದ್ರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ನಗರ ಘಟಕ ಶರಣ ಸಾಹಿತ್ಯ ಪರಿಷತ್ , ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಧಾರ್ಮಿಕ ಹಾಗೂ ಆಧ್ಯಾತ್ಮಿಕತೆಯಲ್ಲಿ ಶ್ರೀಮಂತ ದೇಶ. ಆಧ್ಯಾತ್ಮಿಕತೆ ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗ. ಆಧ್ಯಾತ್ಮಿಕತೆಯಿಂದ ಕೂಡಿದ ಬಸವಾದಿ ಶರಣರ ವಚನಗಳು, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬಸವಣ್ಣ, ಅಂಬೇಡ್ಕರ್‌ರಂತಹ ಮಹಾನ್ ನಾಯಕರು ಜಾತ್ಯಾತೀತವಾಗಿ ಸಮಾನತೆ ಹಾಗೂ ಅಶ್ಪಶ್ಯೃತೆ ನಿವಾರಣೆಗೆ ಶ್ರಮಿಸಿದವರು. ಅನ್ಯಾಯದ ವಿರುದ್ಧ ಕ್ರಾಂತಿ ಮಾಡಿದವರು. ಇಂತಹ ಆದರ್ಶ ವ್ಯಕ್ತಿಗಳ ತತ್ವ ಸಿದ್ಧಾಂತಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಶಿವಮೂರ್ತಿ, ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಕೆ.ವಿ. ನಾಗರಾಜಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.