ಸಾರಾಂಶ
ಬ್ಯಾಡಗಿ: ನಾಡಿನ ಪರಂಪರಾಗತ ಸಂಸ್ಕೃತಿಯ ಸತ್ವವೆಲ್ಲವನ್ನು ಹೀರಿಕೊಂಡಿರುವ ಜನಪದ ಸಾಹಿತ್ಯ ಸಾವಿರಾರು ವರ್ಷಗಳಿಂದ ಬೆಳೆದು ಬಂದಿದ್ದರೂ ಇಂದು ಆಧುನಿಕ ದೃಶ್ಯ ಮಾಧ್ಯಮಗಳಿಂದ ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದು ಕಸಾಪ ಜಿಲ್ಲಾಧ್ಯಕ್ಷ ಎಚ್.ಬಿ. ಲಿಂಗಯ್ಯ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಿಂಗಮ್ಮ ಕಳಸೂರಮಠ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ನಿಂಗಮ್ಮ ವೀ.ಕಳಸೂರಮಠ ಸ್ಮರಣಾರ್ಥ ಡಾ. ಮೂಕಯ್ಯಸ್ವಾಮಿ ಕಳಸೂರಮಠ ನೀಡಿದ ಜನಪದ ಸಾಹಿತ್ಯ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ನಂತರ ಮಾತನಾಡಿದರು.ಸಾಹಿತ್ಯದ ಬೇರು ಜನಪದ ಸಾಹಿತ್ಯ. ಕನ್ನಡ ಸಾಹಿತ್ಯದಲ್ಲಿ ಜನಪದ ತುಂಬಾ ಪುರಾತನವಾದದು. ಅಕ್ಷರಲೋಕದಿಂದ ಅಪರಿಚಿತವಾಗಿದ್ದರೂ ತಮ್ಮಸೃ ಜನಶೀಲ ಸೃಷ್ಟಿಯಿಂದ ಅತ್ಯುನ್ನತವಾದ ಸಾಹಿತ್ಯ ಕಟ್ಟಿದವರು ನಮ್ಮ ಜನಪದರು ಈ ಸಾಹಿತ್ಯದಲ್ಲಿ ತೀವ್ರತರ ತತ್ವ ಜ್ಞಾನವಿದೆ ಬದುಕಿನ ಅವಿನಾಭವ ಸಂಬಂಧವಿದೆ. ಧಾರ್ಮಿಕ ಆಯಾಮವಿದೆ ಎಂದರು.
ಉಪನ್ಯಾಸ ನೀಡಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ, ಜನಪದವು ಬರವಣಿಗೆಯ ರೂಪವಿಲ್ಲದ ಸಮುದಾಯಗಳ ಸಾಂಪ್ರದಾಯಕ ಮತ್ತು ಮೌಖಿಕ ಸಂಪ್ರದಾಯಗಳ ಸಾರವೇ ಜನಪದ ಸಾಹಿತ್ಯ. ಜನಪದ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿದ್ದು ಅವು ನಮ್ಮ ವೃತ್ತಿ ಬದುಕಿಗೆ ಹತ್ತಿರವಾಗಿದ್ದು ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿವೆ ಎಂದರು.ಪ್ರೌಢ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಪರಪ್ಪ ಹಾವೇರಿ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ಮಲ್ಲಿಕಾರ್ಜನ ಬಳ್ಳಾರಿ, ಅತಿಥಿಗಳಾಗಿ ಭೂದಾನಿ ಶಿವಯ್ಯ ವೀ. ಕಳಸೂರಮಠ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಚೈತ್ರಾ ರಾಜು ಅಂಗರಗಟ್ಟಿ, ಮುಖ್ಯ ಶಿಕ್ಷಕ ಎ. ಈರೇಶಪ್ಪ ಕಸಾಪ ಸಂಘಟನಾ ಕಾರ್ಯದರ್ಶಿ ಗಿರೀಶಸ್ವಾಮಿ ಇಂಡಿಮಠ, ರಾಜಶೇಖರ ಹೊಸಳ್ಳಿ, ಎ.ಎಂ. ಸೌದಾಗಾರ, ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.