ಸಾರಾಂಶ
ಬಜೆಟ್ ನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿತ್ತು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದ್ದಾರೆ.
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ರಾಜ್ಯದ ಅಭಿವೃದ್ಧಿಯನ್ನು ಮತ್ತಷ್ಟು ಹಿನ್ನೆಡೆಗೆ ತಳ್ಳಿದಂತಾಗಿದ್ದು, ಇದೊಂದು ನಿರಾಶಾದಾಯಕ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರಿಗೆ ಸಂಪರ್ಕ, ಕೈಗಾರಿಕೆಗಳು, ನೀರುದ್ಯೋಗ, ಉದ್ಯೋಗಾವಕಾಶ, ಕೃಷಿ, ನೀರಾವರಿ ಸೇರಿದಂತೆ ವಿವಿಧ ವಲಯಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕಿತ್ತು. ಆದರೆ, ಇದ್ಯಾವುದಕ್ಕೂ ಹೆಚ್ಚಿನ ಗಮನ ನೀಡದೇ ಇರುವುದು ಕಂಡುಬರುತ್ತಿದೆ. ಇದು ಹೇಗಿದೆ ಎಂದರು ಒಂದು ರೀತಿಯಲ್ಲಿ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಬಜೆಟ್‌ನಂತೆ ಕಾಣಿಸುತ್ತಿದೆ. ಹೀಗಾಗಿ, ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದಂತೆ ಕಾಣುತ್ತಿದೆ ಎಂದಿದ್ದಾರೆ.ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿತ್ತು. ಆದರೆ, ಬೆಂಗಳೂರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಉಳಿದೆಡೆ ನಿರ್ಲಕ್ಷ್ಯ ತೋರಿರುವುದು ಕಂಡುಬರುತ್ತಿದೆ. ಕಾಂಗ್ರೆಸ್ ಸರ್ಕಾರ ಹೊಸ ಹೊಸ ಯೋಜನೆ ನೀಡಲಿದೆ ಎಂದು ಜನತೆ ಕನಸು ಕಾಣುತ್ತಿದ್ದರು. ಆದರೆ, ಅವರ ನಿರೀಕ್ಷೆಗಳನ್ನು ಈ ಬಜೆಟ್ ಸುಳ್ಳಾಗಿಸಿದೆ ಎಂದು ವಿಷಾಧಿಸಿದ್ದಾರೆ.