ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೌಶಲ್ಯಾಭಿವೃದ್ಧಿ, ಮೇಕ್ ಇನ್ ಇಂಡಿಯಾ ಹಾಗೂ ಮುದ್ರಾ ಯೋಜನೆಗಳ ಮೂಲಕ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗಿದೆ.

ಕಾರವಾರ: ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಪದವೀಧರರಲ್ಲಿ ನಿರಾಶೆ ಮೂಡಿದೆ ಎಂದು ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಸಂಕನೂರು ಆರೋಪಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 43 ಇಲಾಖೆಗಳು, ನಿಗಮ ಮಂಡಳಿಗಳು ಹಾಗೂ 14 ವಿಶ್ವವಿದ್ಯಾಲಯಗಳು ಸೇರಿದಂತೆ ಸುಮಾರು 4 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ, ಸರ್ಕಾರ ಅಲ್ಪಪ್ರಮಾಣದ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೌಶಲ್ಯಾಭಿವೃದ್ಧಿ, ಮೇಕ್ ಇನ್ ಇಂಡಿಯಾ ಹಾಗೂ ಮುದ್ರಾ ಯೋಜನೆಗಳ ಮೂಲಕ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಈಗಾಗಲೇ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಚಾರ ಚುರುಕುಗೊಳಿಸಲಾಗಿದೆ. ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸುಮಾರು 25 ವರ್ಷಗಳಿಂದ ನಿರಂತರ ಸಂಪರ್ಕ ಹೊಂದಿರುವ ತಮಗೆ ಶಾಲೆ, ಕಾಲೇಜು, ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕ್‌ಗಳ ವಲಯದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಸಂಕನೂರ ಅವರು, ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.ಇನ್ನು ತಾವು ಆಯ್ಕೆಯಾದ ಬಳಿಕ ಪದವೀಧರರ ಪರವಾಗಿ ಕೆಲಸ ಮಾಡಿಲ್ಲ ಎಂಬ ಆರೋಪ ಸರಿಯಲ್ಲ ಎಂದು ಸಂಕನೂರ ತಿಳಿಸಿದರು.

ಧಾರವಾಡ, ಹುಬ್ಬಳ್ಳಿ, ಗದಗ ಹಾಗೂ ಶಿರಸಿಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವುದಕ್ಕೂ ತಮ್ಮ ಪ್ರಯತ್ನ ಕಾರಣವಾಗಿದೆ. ಅಲ್ಲದೇ ಇತ್ತೀಚಿನ ಅವಧಿಯಲ್ಲಿಯೂ ಪದವೀಧರರ ಹಾಗೂ ಶಿಕ್ಷಕರ ನೇಮಕಾತಿ ವಿಚಾರಗಳಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಎತ್ತಿದ್ದಾಗಿ ಸಂಕನೂರು ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಲಿಂಗರಾಜ ಪಾಟೀಲ್ ಹಾಗೂ ಗಣಪತಿ ಉಳ್ವೇಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಪಕ್ಷದ ಪ್ರಮುಖರಾದ ರಾಜೇಂದ್ರ ನಾಯ್ಕ, ಸುನೀಲ್ ಸೋನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.