‘ಮೋದಿ..’ಎಂದು ಕೂಗುತ್ತಿದ್ದರಿಗೆ ತಿರುಪತಿ ನಾಮ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

| Published : May 03 2024, 01:12 AM IST / Updated: May 03 2024, 11:00 AM IST

‘ಮೋದಿ..’ಎಂದು ಕೂಗುತ್ತಿದ್ದರಿಗೆ ತಿರುಪತಿ ನಾಮ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್‌ನ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಶಿವಮೊಗ್ಗ :  ಮೋದಿ ಮೋದಿ ಎಂದು ಕೂಗುತ್ತಿದ್ದ ಯುವಕರಿಗೆ ಮೋದಿ ತಿರುಪತಿ ನಾಮ ಹಾಕಿದರು. ಅಚ್ಛೇ ದಿನ್ ಬರುತ್ತದೆ ಅಂತಾ ಹೇಳಿದ್ರು, ಅಚ್ಛೇ ದಿನ್ ಬಂದಿದೆಯಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್‌ನ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಮತಯಾಚಿಸಿ ಮಾತನಾಡಿದ ಅವರು, ಕೆಲಸ ಕೊಡಿ ಎಂದರೆ ಮೋದಿ ಪಕೋಡಾ ಮಾರಿ ಎಂದರು. ಇವರು ಬಂದ ಬಳಿಕ ಅಕ್ಕಿ, ಬೇಳೆ, ಗ್ಯಾಸ್ ಬೆಲೆ ಎಷ್ಟು ಏರಿಕೆಯಾಗಿವೆ ಎಂದು ಜನರಿಗೆ ಗೊತ್ತಿದೆ ಎಂದು ಮಾತಿನಲ್ಲೆ ತಿವಿದರು.

2014ರಲ್ಲಿ ಒಂದು ಲೀಟರ್ ಪೆಟ್ರೋಲ್ 70 ರೂಪಾಯಿ ಇತ್ತು. ಇವತ್ತು 105 ರು. ಇದೆ. ಗ್ಯಾಸ್ ಸಿಲಿಂಡರ್ 414 ರೂಪಾಯಿ ಇತ್ತು ಇವತ್ತು 950 ರು. ಇದೆ. ಅಚ್ಛೇ ದಿನ್‌ ಬರುತ್ತದೆ ಎಂದಿದ್ದರು, ನಿಮಗೆ ಬಂದಿದೆಯಾ, 15 ಲಕ್ಷ ರುಪಾಯಿ ನಿಮ್ಮ ಅಕೌಂಟ್‌ಗೆ ಬಂದಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಲತಾ ಸೇರಿ 26 ಮಂದಿ ಬಿಜೆಪಿ ಸಂಸದರಿದ್ದರು. ಆದರೆ, ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಬಾಯಿಬಿಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೆವು. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯದ ಬರಗಾಲದ ಪ್ರದೇಶಕ್ಕೆ ಭೇಟಿಕೊಟ್ಟು ವರದಿ ಕೊಟ್ಟರೂ ಕೇಂದ್ರ ಸರ್ಕಾರ ಒಂದು ರುಪಾಯಿ ಹಣ ನೀಡಲಿಲ್ಲ. ಏಳು ತಿಂಗಳು ಕಾದರೂ ಒಂದು ರುಪಾಯಿ ಕೊಡಲಿಲ್ಲ. 45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಸುಮಾರು 38 ಸಾವಿರ ಕೋಟಿ ರುಪಾಯಿ ನಷ್ಟವಾಯ್ತು. ನಮ್ಮ ಸಂಪನ್ಮೂಲದಿಂದ 2 ಸಾವಿರ ರು.ವರೆಗೆ 34 ಲಕ್ಷ ರೈತರಿಗೆ ಪರಿಹಾರ ನೀಡಿದೆವು ಎಂದರು.

ಸಾಲಮನ್ನಾ ಮಾಡಿ ಎಂದು ರೈತರು ಹೋರಾಟ ನಡೆಸಿದರೆ ನರೇಂದ್ರ ಮೋದಿ ಜಪ್ಪಯ್ಯ ಅನ್ನಲ್ಲಿಲ್ಲ. ಬಿಜೆಪಿ ಸರ್ಕಾರ ರೈತರ ವಿರೋಧಿ, ಬಡವರ ವಿರೋಧಿ, ಮಹಿಳೆಯರ ವಿರೋಧಿ ಸರ್ಕಾರವಾಗಿದೆ. ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನ ನೀಡಿದ್ದೆವು. ಅಧಿಕಾರಕ್ಕೆ ಬಂದ ತಕ್ಷಣವೇ ಕೊಟ್ಟ ಮಾತಿನಂತೆ ಶಕ್ತಿಯೋಜನೆಯನ್ನ ಜಾರಿಗೆ ತಂದಿದ್ದೇವೆ ಎಂದರು.

ನನಗೆ ಇರುವ ಮಾಹಿತಿ ಪ್ರಕಾರ, ಶಿವಮೊಗ್ಗದಲ್ಲಿ ಈ ಸಲ ಬದಲಾವಣೆಯ ಮಾತು ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಗೀತಾ ಅವರನ್ನು ಶಿವಮೊಗ್ಗ ಜನತೆ ಗೆದ್ದೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೇ ಮಧು ಬಂಗಾರಪ್ಪರವರಿಗೆ ಶಕ್ತಿ ಬರಲಿದ. ಜೊತೆಗೆ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್ ರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಕುವೆಂಪು, ಬಂಗಾರಪ್ಪ ಅವರ ನಾಡು. ಶಾಂತಿಯ ತೋಟ.ಇಲ್ಲಿಂದಲೇ ನಮ್ಮ ಯುವ ನಿಧಿ ಗ್ಯಾರಂಟಿ ಗೆ ಚಾಲನೆ ನೀಡಿದ್ದೇವೆ. ಈ ಬಾರಿ ಶಿವಮೊಗ್ಗ ಸೇರಿ ರಾಜ್ಯದಲ್ಲಿ ಎಲ್ಲ ಸ್ಥಾನ ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ,ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದುನಿಯಾ ವಿಜಯ್, ಚುನಾವಣಾ ಉಸ್ತುವಾರಿ ಅನಿಲ್ ತಡಕಲ್ ಸೇರಿದಂತೆ ಹಲವರಿದ್ದರು.

‘ಎಲೆಕ್ಷನ್ ಬಂತೆಂದರೆ ಮೋದಿಗೆ ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ’

ಎನ್‌ಡಿಆರ್‌ಎಫ್ ಪ್ರಕಾರವೇ 18,172 ಕೋಟಿ ರು. ಪರಿಹಾರದ ಹಣವನ್ನು ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಒಂದು ರುಪಾಯಿನೂ ಕೊಡಲಿಲ್ಲ. ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬೇಕಾಯ್ತು. ಆನಂತರ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ರು. ಮಾತ್ರವೇ ನೀಡಿತು. ಇದು ಏನಕ್ಕೂ ಸಾಲದು ಎಂದು ಸುಪ್ರೀಂ ಕೋರ್ಟ್‌ ನಲ್ಲಿ ವಾದ ಮಂಡಿಸಿದ್ದೇವೆ. ಕೇಂದ್ರ ಸರ್ಕಾರದ ತಂಡ ಹೆಚ್ಚು ಹಣವನ್ನ ನೀಡಬೇಕು ಎಂದು ಶಿಫಾರಸ್ಸು ಮಾಡಿದರು. ನಮಗೆ ಕಡಿಮೆ ಹಣ ನೀಡಿದೆ ಎಂದು ವಾದ ಮಾಡಿದ್ದೆವು. ಇಷ್ಟೆಲ್ಲಾ ಅನ್ಯಾಯ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಎಲೆಕ್ಷನ್ ಬಂದಾಗ ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ ತೋರುತ್ತಾರೆ. ಆದರೆ, ಬರಗಾಲದಲ್ಲಿ ಒಂದು ಬಾರಿಯೂ ಮೋದಿ ರಾಜ್ಯಕ್ಕೆ ಬರಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಅವರು ಕೊಟ್ಟ ಮಾತುಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ಕುಟುಕಿದರು.