ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಯನ್ನು ತಪ್ಪಿಸಲು ವಿಫಲರಾಗುವ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ)ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದಕ್ಕೆ ನಿಷೇಧವಿದೆ. ಆದರೂ, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಸಂಘ-ಸಂಸ್ಥೆಗಳು ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಫ್ಲೆಕ್ಸ್-ಬ್ಯಾನರ್‌ಗಳ ಹಾವಳಿ ತಪ್ಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಿಂದೆಯೂ ಸೂಚನೆ ನೀಡಿದ್ದೇನೆ. ಆದರೂ, ಅದು ಸಾಧ್ಯವಾಗಿಲ್ಲ. ನಮ್ಮ ಪಕ್ಷದವರೇ ಫ್ಲೆಕ್ಸ್-ಬ್ಯಾನರ್ ಹಾಕಿದರೂ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಫ್ಲೆಕ್ಸ್-ಬ್ಯಾನರ್ ಹಾಕುವುದನ್ನು ತಡೆಯದಿದ್ದರೆ, ಅಲ್ಲಿನ ಎಆರ್‌ಒಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಘನತ್ಯಾಜ್ಯ ಸಂಸ್ಕರಣೆಗೆ4 ಕಡೆ ಘಟಕ:ಘನತ್ಯಾಜ್ಯ ಸಂಗ್ರಹಕ್ಕೆ ಸಾರ್ವಜನಿಕರಿಂದ 100 ರು. ಶುಲ್ಕ ವಸೂಲಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಘನತ್ಯಾಜ್ಯ ನಿರ್ವಹಣೆ ನಿಯಮದಂತೆ ಶುಲ್ಕ ವಿಧಿಸಲಾಗುತ್ತಿದೆ. ಅದು ಸಾರ್ವಜನಿಕರು ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡೇ ಶುಲ್ಕ ನಿಗದಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗದಂತೆ ತಡೆಯಲು 4 ಕಡೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುತ್ತಿದೆ. ಅಲ್ಲಿ ತ್ಯಾಜ್ಯದಿಂದ ವಿದ್ಯುತ್, ಸಿಎನ್‌ಜಿ ಉತ್ಪಾದನೆ ಮಾಡಲಾಗುವುದು ಎಂದರು.