ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ಕಡಿಮೆ ಕರ ವಸೂಲಾತಿಯಾದ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಜಾಥಾ, ಸ್ವಚ್ಛ ವಾಹಿನಿ ಆಟೋ ಮೂಲಕ ಹೆಚ್ಚು ಪ್ರಚಾರಗೊಳಿಸಿ, ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ತಾಪಂ ಇಒ ಡಾ.ಭೀಮಾಶಂಕರ ಕನ್ನೂರ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಕಡಿಮೆ ಕರ ವಸೂಲಾತಿಯಾದ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಜಾಥಾ, ಸ್ವಚ್ಛ ವಾಹಿನಿ ಆಟೋ ಮೂಲಕ ಹೆಚ್ಚು ಪ್ರಚಾರಗೊಳಿಸಿ, ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ತಾಪಂ ಇಒ ಡಾ.ಭೀಮಾಶಂಕರ ಕನ್ನೂರ ಸೂಚಿಸಿದರು.ತಾಪಂ ಸಭಾ ಭವನದಲ್ಲಿ ಗುರುವಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರ ವಸೂಲಿಗಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲಿವರೆಗೂ ಶೇ.11.75 ರಷ್ಟು ಪ್ರಗತಿಯಾಗಿದ್ದು, ಗ್ರಾಮ ಪಂಚಾಯತಿವಾರು ಪ್ರಗತಿಗೆ ಹೋಲಿಸಿದಾಗ ಖೇಡಗಿ, ಹಡಲಸಂಗ, ಮಿರಗಿ, ಹಿರೇಬೇವನೂರ ಮತ್ತು ನಾದ ಕೆ.ಡಿ ಪಂಚಾಯಿತಿಗಳು ತುಂಬಾ ಕಡಿಮೆ ಪ್ರಗತಿ ಸಾಧಿಸಿವೆ. ಆದ್ದರಿಂದ ಕಡಿಮೆ ಕರ ವಸೂಲಾತಿ ಮಾಡಿದ ಗ್ರಾಪಂಗಳಲ್ಲಿ ಹೆಚ್ಚು ಪ್ರಚಾರಗೊಳಿಸಬೇಕು. ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡಲು ಸೂಚನೆ ನೀಡಿದರು. ತಿಂಗಳೊಳಗೆ ಕಡ್ಡಾಯವಾಗಿ ಶೇ.100 ರಷ್ಟು ಕರ ವಸೂಲಾತಿ ಹೆಚ್ಚಾಗಬೇಕು ಎಂದು ಸೂಚಿಸಿದರು.
ಗ್ರಾಪಂಗಳಲ್ಲಿ ಹೆಚ್ಚಿನ ಕರ ವಸೂಲಿ ಮಾಡಿದ ಸಂಬಂಧಪಟ್ಟ ಪಿಡಿಒಗಳು ಹಾಗೂ ಬಿಲ್ ಕಲೆಕ್ಟರ್‌ಗಳನ್ನು ತಾಲೂಕು ಪಂಚಾಯತಿಯಲ್ಲಿ ಸನ್ಮಾನಿಸಲಾಗುವುದು. ಕಡಿಮೆ ಪ್ರಗತಿ ಸಾಧಿಸಿದ ಪಿಡಿಒ, ಬಿಲ್ ಕಲೆಕರ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಸಹಾಯಕ ನಿರ್ದೇಶಕರು (ಪಂ.ರಾ) ಪ್ರಕಾಶ ರಾಠೋಡ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂಗಳೂ ಪೂರ್ಣ ಪ್ರಮಾಣದ ಕರ ವಸೂಲಿಗೆ ಪ್ರಯತ್ನಿಸಿ ಗ್ರಾಪಂಗಳಲ್ಲಿ ಪ್ರತಿ ಸೋಮವಾರ ಆಯೋಜಿಸುವ ತೆರಿಗೆ ಸಂಗ್ರಹ ಅಭಿಯಾನದ ಯಶಸ್ಸಿಗೆ ಸಹಕರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರು (ಪಂ.ರಾ) ಪ್ರಕಾಶ ರಾಠೋಡ, ಯೋಜನಾಧಿಕಾರಿಗಳು ನಂದೀಪ ರಾಠೋಡ, ಕಚೇರಿ ವ್ಯವಸ್ಥಾಪಕ ಮುರುಗೇಶ ನಾರಾಯಣಪುರ ಎಲ್ಲ ಗ್ರಾಪಂನ ಪಿಡಿಒಗಳು, ಕಾರ್ಯದರ್ಶಿಗಳು , ಗ್ರೇಡ್ 1, 2 ಹಾಗೂ ಲೆಕ್ಕಿಗರು ಉಪಸ್ಥಿತರಿದ್ದರು.