ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಂಗನವಾಡಿ ಕೇಂದ್ರಗಳ ಮೂಲಕ 3 ರಿಂದ 6 ವರ್ಷದ ಮಕ್ಕಳಿಗೆ, ಗರ್ಭಣಿ ಹಾಗೂ ಬಾಣಂತಿ ಮಹಿಳೆಯರಿಗೆ ನೀಡಲಾಗುವ ಸೇವೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಶಶಿಧರ ಕುರೇರ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದ ಸಿಇಒ, ಮಕ್ಕಳಿಗೆ ಹಾಗೂ ಗರ್ಭಿಣಿ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಉತ್ತಮ ಗುಣಮಟ್ಟದ ಆಹಾರ ವಿತರಣೆ ಮಾಡಬೇಕು. ಎಲ್ಲಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರ ಕರ್ತವ್ಯವಾಗಿದೆ. ಇದರಲ್ಲಿ ಯಾವುದೇ ಲೋಪ ಕಂಡು ಬಂದರು ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದ್ದು, ಹಾಜರಾತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ವಲಯ ಮೇಲ್ವಿಚಾರಕರು ಪ್ರತಿ ತಿಂಗಳು ಕಡ್ಡಾಯವಾಗಿ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪೂರಕ ಪೌಷ್ಟಿಕ ಆಹಾರ, ಮಕ್ಕಳ ಹಾಜರಾತಿ, ದಾಖಲಾತಿಗಳ ನಿರ್ವಹಣೆ, ಪೋಷನಾ ಟ್ರಾಕರ್‌ನಲ್ಲಿ ಮಾಹಿತಿ ಅಳವಡಿಕೆ, ಅಂಗನವಾಡಿ ಕೇಂದ್ರಗಳ ಸ್ವಚ್ಚತೆ ಇತ್ಯಾದಿ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕವಿತಾಳ ಮಾತನಾಡಿ, ಈಗಾಗಲೇ 66 ನಿವೇಶನಗಳನ್ನು ಗುರುತಿಸಿ ಇಲಾಖೆಗೆ ಹಸ್ತಾಂತರ ಪಡೆಯಲಾಗಿದೆ. ಇನ್ನುಳಿದ ಕೇಂದ್ರಗಳಿಗೆ 3 ತಿಂಗಳಲ್ಲಿ ನಿವೇಶನ ಗುರುತಿಸಿ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ಮಂಜೂರಾತಿಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ನಿವೇಶನ ಗುರುತಿಸಲು ಸ್ಥಳೀಯ ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಲು ಹಾಗೂ ಶಿಕ್ಷಣ ಇಲಾಖೆಯಿಂದ ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಗುರುತಿಸಿ ಹಸ್ತಾಂತರ ಪಡೆಯುವಂತೆ ಸಿಇಒ ಸೂಚನೆ ನೀಡಿದರು.ಬಾಲ್ಯ ವಿವಾಹ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಇಲ್ಲಿಯವರೆಗೂ 42 ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ದೂರುಗಳು ಬಂದಿವೆ. ಅದರಲ್ಲಿ 32ನ್ನು ತಡೆಯಲಾಗಿದೆ. ಇನ್ನುಳಿದ 8 ದೂರುಗಳು ಮದುವೆ ಆದ ನಂತರ ಬಂದಿದ್ದು, ಅವುಗಳಲ್ಲಿ ಒಂದು ಎಫ್ಐಆರ್ ದಾಖಲಿಸಲಾಗಿದೆ. ಇನ್ನುಳಿದ 7 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸಲಾಗುತ್ತದೆ ಎಂದು ಉಪನಿರ್ದೇಶಕ ಪ್ರಭಾಕರ ತಿಳಿಸಿದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅಮರೇಶ್.ಎಚ್ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.
--------------------------------ಬಾಕ್ಸ್
ಅಂಗನವಾಡಿಗಳಿಗೆ ಸೌಲಭ್ಯ ಮುಖ್ಯಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ಥಳೀಯ ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜೊತೆ ಸೂಕ್ತ ಸಮನ್ವಯ ಸಾಧಿಸಿ ಎಲ್ಲಾ ಕೇಂದ್ರಗಳಲ್ಲೂ ಮೂಲಭೂತ ಸೌಕರ್ಯ ಇರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ 524 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸಿಇಒ ಶಶಿಧರ ಕುರೇರ ಸಭೆಯಲ್ಲಿ ತಿಳಿಸಿದರು.