ಸಾರಾಂಶ
ದೇವರಹಿಪ್ಪರಗಿ: ಜನಸ್ನೇಹಿ ಸೇವೆ ನೀಡೋದು ಪೊಲೀಸರ ಪ್ರಮುಖ ಕರ್ತವ್ಯ. ಜನಸಾಮಾನ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ತತ್‌ಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಲು ನಿರ್ಲಕ್ಷ ವಹಿಸಿದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಿದರು. ಜನಸ್ನೇಹಿ ಪೊಲೀಸ್ ಮಾದರಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕುಂದು ಕೊರತೆ ಆಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ, ಇಲ್ಲವಾದರೆ ನನ್ನನ್ನೇ ನೇರವಾಗಿ ಸಂಪರ್ಕಿಸಿ. ಜನಸ್ನೇಹಿ ಸೇವೆ ನೀಡೋದು ಪೊಲೀಸ್ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಸೇರಿದಂತೆ ಠಾಣೆಯ ಸಿಬ್ಬಂದಿ ಇದ್ದರು.