ಸಾರಾಂಶ
ಭರತನಾಟ್ಯ ಕಲಿಯಬೇಕೆಂದರೆ ನಮ್ಮಲ್ಲಿ ತಾಳ್ಮೆ ಇರಬೇಕು. ಅದಕ್ಕೆ ಹೆಚ್ಚಿನ ಸಮಯ ನೀಡಬೇಕು.
ಸಿದ್ದಾಪುರ: ಭರತನಾಟ್ಯ ಕಲಿಯಬೇಕೆಂದರೆ ನಮ್ಮಲ್ಲಿ ತಾಳ್ಮೆ ಇರಬೇಕು. ಅದಕ್ಕೆ ಹೆಚ್ಚಿನ ಸಮಯ ನೀಡಬೇಕು. ಇದನ್ನು ಕಲಿಯುವುದರಿಂದ ನಮ್ಮಲ್ಲಿ ಶಿಸ್ತು, ಜ್ಞಾನ ವೃದ್ಧಿಯಾಗುತ್ತದೆ ಎಂದು ಮಯೂರ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ ನಾಯ್ಕ ಹಸ್ವಿಗುಳಿ ಹೇಳಿದರು.
ಇಲ್ಲಿಯ ಗಂಗಾಂಬಿಕಾ ದೇವಾಲಯದ ಸಭಾಭವನದಲ್ಲಿ ನಾಡದೇವಿ ಜನಪರ ವೇದಿಕೆಯವರು ಹಮ್ಮಿಕೊಂಡಿರುವ ಭರತನಾಟ್ಯ ತರಬೇತಿ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಬೇಸಿಗೆ ರಜಾ ಸಮಯವನ್ನು ವ್ಯರ್ಥ ಮಾಡದೇ ಶಿಬಿರದಲ್ಲಿ ತೊಡಗಿಸಿಕೊಳ್ಳಿ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ವಿ.ಎನ್. ನಾಯ್ಕ ಬೇಡ್ಕಣಿ, ನಮ್ಮ ಪೂರ್ವಿಕರು ಬೆಳೆಸಿದ ಈ ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರವನ್ನು ಗೌರವಿಸುವ ಕಲೆಗಳು ಪುನರಾವರ್ತಿತವಾಗುತ್ತಿರುವುದು ಸಮಾಜ ಎಲ್ಲ ದಿಕ್ಕಿನಲ್ಲಿಯೂ ಸಮೃದ್ಧವಾಗಿ ಬೆಳೆಯುತ್ತಿದೆ ಎನ್ನುವುದರ ಸೂಚನೆ. ಎಲ್ಲರಲ್ಲಿಯೂ ಒಂದೊಂದು ರೀತಿಯ ಕಲೆಗಳು ಇರುತ್ತವೆ. ಅದಕ್ಕೆ ಸರಿಯಾದ ತರಬೇತಿ ವೇದಿಕೆಗಳು ಸಿಕ್ಕಾಗ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ. ಅಂತಹ ಕಲೆಗಳ ಪೋಷಿಸುವ ಕೆಲಸಗಳು ಆಗಬೇಕು ಎಂದರು.ಉತ್ತರ ಕನ್ನಡ ಜಿಲ್ಲಾ ಮಡಿವಾಳ ಸಮಾಜದ ಯುವ ಘಟಕದ ಅಧ್ಯಕ್ಷ ವಿಶ್ವಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಕಾರ್ಯದರ್ಶಿ ಗುರುರಾಜ ನಾಯ್ಕ, ಪತ್ರಕರ್ತ ದಿವಾಕರ ನಾಯ್ಕ ಸಂಪಖಂಡ, ಶಿಬಿರದ ತರಬೇತಿ ಶಿಕ್ಷಕಿ ಆರ್.ಸವಿತಾ ಮಾತನಾಡಿದರು.
ವೇದಿಕೆ ಅಧ್ಯಕ್ಷ ಅನಿಲ ಕೊಠಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಖುಷಿ ಕೊಂಡ್ಲಿ ಪ್ರಾರ್ಥಿಸಿದಳು. ತಾನವಿ ಯಕ್ಷ ನೃತ್ಯ ಪ್ರದರ್ಶಿಸಿದಳು. ತೃಪ್ತಿ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸಿದ್ದಾಪುರದಲ್ಲಿ ನಾಡದೇವಿ ಜನಪರ ವೇದಿಕೆ ಹಮ್ಮಿಕೊಂಡಿರುವ ಭರತನಾಟ್ಯ ತರಬೇತಿ ಬೇಸಿಗೆ ಶಿಬಿರ ಉದ್ಘಾಟಿಸಲಾಯಿತು.