ಸಾರಾಂಶ
ಹೂವಿನಹಡಗಲಿ; ಕಾಲೇಜು ಹಂತದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಿಕೆಯಿಂದ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಐಗೋಳ್ ಚಿದಾನಂದ ಹೇಳಿದರು.ತಾಲೂಕಿನ ಹೊಳಗುಂದಿ ದತ್ತು ಗ್ರಾಮದಲ್ಲಿ ಪಟ್ಟಣದ ಜಿಬಿಆರ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ 2024- 2025ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎನ್‌ಎಸ್‌ಎಸ್ ಯೋಜನೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಲಿಕೆ ಬಹಳ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ, ಸೇವಾ ಮನೋಭಾವನೆ ಬೆಳೆಸುತ್ತದೆ. ಜತೆಗೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಪ್ರೇರಣೆ ನೀಡುತ್ತದೆ ಎಂದರು.ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯಲು ಸಾಧ್ಯ. ಬದುಕಿನಲ್ಲಿ ಶಿಸ್ತು, ಭ್ರಾತೃತ್ವ, ಸಂಯಮ, ಸಮಯಪ್ರಜ್ಞೆ, ನಾಯಕತ್ವ ಗುಣ ಬೆಳೆಸುತ್ತದೆ. ಜತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಉತ್ತಮ ವೇದಿಕೆಯಾಗುತ್ತದೆ. ಎಲ್ಲ ಶಿಬಿರರ್ಥಿಗಳು ಇರದ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಹೇಳಿದರು.
ಜಿಬಿಆರ್ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರು ರೇವಣ್ಣ, ಪ್ರಾಧ್ಯಾಪಕ ಡಾ.ಚಂದ್ರಬಾಬು, ದೈಹಿಕ ನಿದೇಶಕ ಬಡೇಸಾಹೇಬ್ ಮಾತನಾಡಿದರು.ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಸಿದ್ದೇಶ್ವರ ದೇವಸ್ಥಾನದ ಅಧ್ಯಕ್ಷ ಎಸ್.ಮಹೇಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಟಿ.ಹನುಮಂತಪ್ಪ, ಪ್ರಾಧ್ಯಾಪಕ ಡಾ.ಮಹಿಮಾ ಜ್ಯೋತಿ, ಡಾ.ಶರಣಪ್ಪ, ಮಾಬುಸಾಬ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಯೋಜನೆಯ ಶಿಬಿರ ಗೀತೆಯನ್ನು ಹಾಡಿದರು.ನಂತರದಲ್ಲಿ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.