ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ-ಪಾಂಡುರಂಗ

| Published : Jun 03 2024, 12:30 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಮುಖ್ಯ. ನಿಸ್ವಾರ್ಥ, ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸಿದರೇ ಜೀವನವೇ ಸಾರ್ಥಕವಾಗುತ್ತದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಂಡುರಂಗ ತೊಂಡೂರ ಹೇಳಿದರು.

ಹಾನಗಲ್ಲ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಮುಖ್ಯ. ನಿಸ್ವಾರ್ಥ, ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸಿದರೇ ಜೀವನವೇ ಸಾರ್ಥಕವಾಗುತ್ತದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಂಡುರಂಗ ತೊಂಡೂರ ಹೇಳಿದರು.ತಾಲೂಕಿನ ಹಾವಣಿಗೆ ಗ್ರಾಮದಲ್ಲಿ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಎನ್.ಎಸ್.ಎಸ್ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುತ್ತಾ ಎನ್.ಎಸ್.ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಬದುಕಿನ ಅರಿವು ಹಾಗೂ ಆಯಾಮಗಳನ್ನು ತಿಳಿಸುವುದರೊಂದಿಗೆ ಹೊಂದಾಣಿಕೆಯ ಪಾಠ ಹೇಳಿಕೊಡುವುದಾಗಿದೆ. ಸಮಾಧಾನದ ಮೂಲಕ ಗ್ರಾಮವನ್ನು ಸ್ವಚ್ಛಗೊಳಿಸುವುದರೊಂದಿಗೆ ಜನತೆಗೆ ಜನಜಾಗೃತಿಯ ಅರಿವು ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೀರಿ ಎಂದು ಶಿಬಿರಾರ್ಥಿಗಳನ್ನು ಅಭಿನಂದಿಸಿದರು. ಶಿಬಿರ ಯಶಸ್ವಿಯಾಗಲು ಸಹಕರಿಸಿದ ಗ್ರಾಮಸ್ಥರನ್ನು ಹಾಗೂ ಶಾಲೆಯ ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅನಂತರಾಜು ಹವಳಣ್ಣನವರ, ಮಾತನಾಡಿ, ಎನ್‌ಎಸ್‌ಎಸ್ ಶಿಬಿರವು ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ವೇದಿಕೆಯಾಗಿದೆ. ಇಲ್ಲಿ ಕಲಿತ ತತ್ವಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಹಾವಣಗಿ ಶಾಲೆ ಮುಖ್ಯೋಪಾಧ್ಯಾಪಕ ರಾಜಶೇಖರ ಹಳ್ಳಿಬೈಲ ಅವರು ಮಾತನಾಡುತ್ತ, ಹಳ್ಳಿಗಳಲ್ಲಿ ಇಂತಹ ಶಿಬಿರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ. ಉತ್ತಮ ಶಿಕ್ಷಣ ಪಡೆದುಕೊಂಡರೆ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮತ್ತು ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದು ತಿಳಿಸಿದರು. ಪಿಡಿಓ ಅರವಿಂದ ದೇಸಾಯಿ ಅವರು ಶಿಬಿರಾರ್ಥಿಗಳಿಗೆ ಪಿಡಿಓ ಅವರು ಗ್ರಾಮಗಳಲ್ಲಿ ನೆರವೇರಿಸಬೇಕಾದ ಕಾರ್ಯಗಳು ಹಾಗೂ ಸಮಾಜದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಶಿಬಿರಾರ್ಥಿಗಳು ಏಳು ದಿನಗಳವರೆಗೆ ಗ್ರಾಮದ ಶಾಲೆ, ಆಟದ ಮೈದಾನ ನಿರ್ಮಾಣ, ಕಂಪೌಂಡ್‌ ಗೋಡೆಗೆ ಬಣ್ಣ ಬಳಿದು ಶ್ರಮದಾನ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ, ನೂರಾರು ಗಿಡಮರ ಹಾಗೂ ರಕ್ತದಾನ ಶಿಬಿರ, ಮತದಾನ, ಮೌಢ್ಯತೆ, ಪರಿಸರ ಜಾಗೃತಿ, ಜನಸಂಖ್ಯಾ ಸ್ಫೋಟ, ಹೀಗೆ ವಿವಿಧ ಜನ ಜಾಗೃತಿ ಶಿಬಿರ, ಎಸ್.ಎಸ್.ಎಲ್.ಸಿ ಮತ್ತು ಪಿ.ಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾಹಿತಿ ನಿಡುವ ಕಾರ್ಯಕ್ರಮಗಳನ್ನು ಕೈಗೊಂಡರು. ಹಾವಣಗಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ರಾಜೇಂದ್ರ ಪದ್ಮೋಜಿ, ಮಾಜಿ ಅಧ್ಯಕ್ಷ ಅನಂತರಾಜು ಹವಳಣ್ಣನವರ, ಎಸ್‌ಡಿಎಂಸಿ ಅಧ್ಯಕ್ಷ ಪಾಂಡುರಂಗ ತೊಂಡೂರ ಈ ಎಲ್ಲ ಕಾರ್ಯಗಳಿಗೆ ಸಾಥ್ ನೀಡಿದರು.ಶಿಬಿರದಲ್ಲಿ ಪ್ರತಿ ದಿನವು ಒಂದೊಂದು ವಿಷಯದ ಕುರಿತು ಉಪನ್ಯಾಸ ನಡೆಯಿತು. ಯೋಗ, ಆಯುರ್ವೇದದ ಅರಿವು ಹಾಗೂ ಮಹತ್ವ, ತಂತ್ರಜ್ಞಾನದ ಉಪಯುಕ್ತತೆ, ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿ, ಕನ್ನಡ ಸಾಹಿತ್ತಿಕ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.ಹಾವಣಗಿ ಗ್ರಾಮದ ಎಸ್.ಡಿ.ಎಮ್.ಸಿ ಉಪಾದ್ಯಕ್ಷರಾದ ಗೀತಾ ಹೊ. ಸರಗಿ ಸದಸ್ಯರಾದ ಗೋಪಾಲ ಶೃಂಗೇರಿ, ನಾಗರಾಜ ಜವಳಿ, ಎನ್.ಎಸ್. ಜವಳಿ, ಮಹಿಳಾ ಪತಂಜಲಿ ಯೋಗ ಸಮಿತಿ ಹಾನಗಲ್ಲ ತಾಲೂಕು ಪ್ರಭಾರಿ ರೇಖಾ ಪಾಟೀಲ್, ಶಿಬಿರಾಧಿಕಾರಿ ಡಾ. ವಿಶ್ವನಾಥ ಬೊಂದಾಡೆ, ಡಾ. ಪ್ರಕಾಶ ಹುಲ್ಲೂರ, ಪ್ರೊ. ದಿನೇಶ ಆರ್. ಇತರರು ಇದ್ದರು.