ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿದ್ದು ಶಿಸ್ತಿನ ಬದುಕು ಪ್ರತಿಯೊಬ್ಬರನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಮತ್ತು ಸೋಮವಾರಪೇಟೆ ಪೊಲೀಸ್ ಉಪವಿಭಾಗ ಹಾಗೂ ಕುಶಾಲನಗರ ಟೌನ್ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸತತ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹಾಗೂ ತಡೆಗಟ್ಟಲು ಯುವ ಪೀಳಿಗೆಯ ಪಾತ್ರ ಕಾನೂನಿನ ಅರಿವಿನ ಸಮಗ್ರ ಮಾಹಿತಿಯನ್ನು ಒದಗಿಸಿದರು. ತಮ್ಮ ಬೆಳವಣಿಗೆಗೆ ತಾವೇ ಎಲ್ಲಾ ರೀತಿಯಲ್ಲಿಯೂ ಕಾರಣಕರ್ತರಾಗುತ್ತೇವೆ. ಯಾವುದೇ ಸಂದರ್ಭ ಯುವ ಪೀಳಿಗೆ ಹಾದಿ ತಪ್ಪಬಾರದು ಎಂದು ಕಿವಿಮಾತು ಹೇಳಿದ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ವಿದ್ಯಾರ್ಥಿಗಳ ಸುಮಾರು 60ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ಮೂಲಕ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಿದರು.ಈ ಸಂದರ್ಭ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳು ಅದನ್ನು ತಡೆಗಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಧಿಕಾರಿ ಡಾ ವೀರಾಂಜನೇಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿವರಣೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ ಐ ಪರಶಿವಮೂರ್ತಿ, ಹಿರಿಯ ಉಪನ್ಯಾಸಕರಾದ ಡಾ ಸತೀಶ್, ಡಾ ಸೀನಪ್ಪ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ ಮತ್ತು ಕಾರ್ಯಕ್ರಮ ಆಯೋಜಕ ಕುಶಾಲನಗರ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ ಜಿ ಪ್ರಕಾಶ್ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿ ಇದ್ದರು.