ಸರ್ಕಾರಿ ಕಚೇರಿಗಳಲ್ಲಿನ ಎಲ್ಲಾ ಕಾಮಗಾರಿಗಳ ಕಡತ ನಿರ್ವಹಣೆ ಹಾಗೂ ಹಾಜರಾತಿ ದಾಖಲೆಗಳ ನಿರ್ವಹಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಕನ್ನಡಪ್ರಭ ವಾರ್ತೆ ಕಾರವಾರಸರ್ಕಾರಿ ಕಚೇರಿಗಳಲ್ಲಿನ ಎಲ್ಲಾ ಕಾಮಗಾರಿಗಳ ಕಡತ ನಿರ್ವಹಣೆ ಹಾಗೂ ಹಾಜರಾತಿ ದಾಖಲೆಗಳ ನಿರ್ವಹಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಸೂಚನೆ ನೀಡಿದರು.

ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕು, ಗ್ರಾಪಂ ಮಟ್ಟದ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಶಾಲೆಗಳು, ಅಂಗನವಾಡಿ, ಹಾಸ್ಟೆಲ್‌ಗಳಿಗೆ ಪ್ರತಿ ತಿಂಗಳಿಗೊಮ್ಮೆ ಭೇಟಿ ನೀಡಿ ಸ್ವಚ್ಛತೆ, ಆಹಾರದ ಗುಣಮಟ್ಟ, ಸಿಬ್ಬಂದಿಗಳ ಕಾರ್ಯ ವೈಖರಿ, ಹಾಜರಾತಿ ಇತ್ಯಾದಿಗಳ ಕುರಿತು ಜಾಗೃತಿ ವಹಿಸಬೇಕು. ಈ ಕುರಿತು ಯಾವುದೇ ದೂರು ಬಾರದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ತಾಲೂಕುವಾರು ಅಭಿವೃದ್ಧಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಡಿ ಮಕ್ಕಳ ಶೈಕ್ಷಣಿಕ ಮಟ್ಟ ಹಾಗೂ ಫಲಿತಾಂಶ ಅಭಿವೃದ್ಧಿಪಡಿಸಲು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದು ಸೂಕ್ತ ಸಲಹೆ ನೀಡಿದರು. ಅಕ್ಷರ ದಾಸೋಹ ಕಾರ್ಯಕ್ರಮದಡಿ ಆಹಾರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಬಾರದಂತೆ ಗಮನ ಹರಿಸಬೇಕು ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಾಲೂಕಿನ ಅಧಿಕಾರಿಗಳು ತಿಂಗಳಲ್ಲಿ ಒಮ್ಮೆಯಾದರೂ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪ್ರಚಲಿತ ವರದಿ ನೀಡುವುದು. ಇನ್ನೂ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳು, ಬಯೋಮೆಟ್ರಿಕ್, ಹಾಜರಾತಿ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಸಂವಹನ ನಡೆಸಬೇಕು ಮತ್ತು ಅವರ ಸಮಸ್ಯೆ ಕುರಿತು ವಿಚಾರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅನುದಾನದ ಖರ್ಚು ವೆಚ್ಚಗಳು, ಕಾಮಗಾರಿ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಇಲಾಖೆವಾರು ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು, ಸಿಬ್ಬಂದಿ ಕೊರತೆ, ಖರ್ಚು-ವೆಚ್ಚಗಳು, ಇತರೆ ಸಮಸ್ಯೆಗಳಿದ್ದಲ್ಲಿ ವರದಿ ನೀಡುವಂತೆ ಸೂಚಿಸಿದರು.ಅನಿರ್ಭಂದಿತ ಅನುದಾನ, 2025-26ನೇ ಸಾಲಿನ ಆರ್ಥಿಕ ಪ್ರಗತಿ, ಅಡಹಾಕ್ ಕಂಡಿಕೆಗಳು, ವಾರ್ಷಿಕ ಲೆಕ್ಕಪತ್ರ, ಸಕಾಲ, ವಸತಿ, ತಾಲೂಕು ಯೋಜನಾ ಅಭಿವೃದ್ಧಿ ಸಮಿತಿ, 15ನೇ ಹಣಕಾಸು, ಎನ್.ಆರ್.ಎಲ್.ಎಮ್, ತೆರಿಗೆ ಸಂಗ್ರಹಣೆ, ಗ್ರಂಥಾಲಯ, ಜೆಜೆಎಂ ಯೋಜನೆಗಳಲ್ಲಿ ಅಭಿವೃದ್ಧಿ ಸಾಧಿಸುವಂತೆ ಸೂಚಿಸಿದರು.ಘನ ತ್ಯಾಜ್ಯ ವಿಲೇವಾರಿ ಘಟಕದಡಿ 2 ತಿಂಗಳಲ್ಲಿ ಆದಷ್ಟು ಅಲ್ಲಿನ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವುದು, ಅಗತ್ಯವಿರುವ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಮನೆ, ಅಂಗಡಿಗಳು, ಹೋಟೆಲ್ ತೆರಿಗೆ ಸಂಗ್ರಹಣೆ ಮಾಡಬೇಕು. ಸ್ವಚ್ಛ ಸಂಕೀರ್ಣ ಘಟಕದಡಿ ಸ್ವಚ್ಛ ವಾಹಿನಿ ಬಳಕೆ ಹಾಗೂ ನಿರ್ವಹಣೆ ಸರಿಯಾಗಿ ಆಗಬೇಕು ಎಂದರು.ನರೇಗಾ ಯೋಜನೆಯಡಿ ವಾರ್ಷಿಕ ಗುರಿ ಸಾಧಿಸುವ ನಿಟ್ಟಿನಲ್ಲಿ ಗ್ರಾಪಂ, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಗಳು ಸಮನ್ವಯ ಸಾಧಿಸಿ ಇನ್ನೆರಡು ತಿಂಗಳಲ್ಲಿ ಯೋಜನೆ ರೂಪಿಸಿ ಮಾನವ ದಿನಗಳ ಸೃಜನೆ ಮಾಡಬೇಕು. ಕಾಮಗಾರಿ ಮುಕ್ತಾಯದಲ್ಲಿ ಅತೀ ಕಡಿಮೆ ಇರುವ ಗ್ರಾಪಂಗಳು ಕ್ರಮ ಕೈಗೊಂಡು ಮುಕ್ತಾಯಗೊಳಿಸಿ ಜಿಪಂಗೆ ವರದಿ ಸಲ್ಲಿಸಬೇಕು. ಇಕೆವೈಸಿ ಪ್ರಗತಿಯಾಗಬೇಕು ಜೊತೆಗೆ ಸಮಸ್ಯೆ ಇರುವ ಕೂಲಿಕಾರರ ಮಾಹಿತಿ ಜಿಪಂಗೆ ನೀಡಬೇಕು ಎಂದರು.

ಜಿಪಂ ಆಡಳಿತ ವಿಭಾಗದ ಉಪಕಾರ್ಯದರ್ಶಿ ಎಂ.ಎಸ್. ಅಲ್ಲಾಭಕ್ಷ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತ, ಮುಖ್ಯ ಲೆಕ್ಕಧಿಕಾರಿ ಆನಂದ್ ಹಬೀಬ್, ತಾಪಂ ಆಡಳಿತಾಧಿಕಾರಿ ದಯಾನಂದ ನಾಯ್ಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ ಹಿತ್ತಲಕೊಪ್ಪ ಹಾಗೂ ತಾಪಂ, ಗ್ರಾಪಂ ಮತ್ತು ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಇದ್ದರು.