ಸಮೀಪದ ಗೌಡೂರು ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾ ದೇವಿ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.

ಹಟ್ಟಿಚಿನ್ನದಗಣಿ: ಸಮೀಪದ ಗೌಡೂರು ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾ ದೇವಿ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.

ಪ್ರವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೌಡೂರು ತಾಪಂ ಮಾಜಿ ಸದಸ್ಯ ರಾಜಾಸೇತು ರಾಮ್ ನಾಯಕ್ ಮಾತನಾಡಿ, ಧಾರ್ಮಿಕ ಪ್ರವಚನಗಳು ಕೇವಲ ಪೂಜೆ ಮತ್ತು ಆಚರಣೆಗಳಿಗೆ ಸೀಮಿತವಾಗದೆ, ಮನುಷ್ಯನ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಸಾಧನಗಳಾಗಿವೆ. ಪುರಾಣಗಳಲ್ಲಿ ಅಡಕವಾಗಿರುವ ನೀತಿ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಯುವಜನತೆ ಮತ್ತು ಮಕ್ಕಳಿಗೆ ನಮ್ಮ ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಪರಿಚಯ ಮಾಡಿಕೊಡುವುದು ಅಗತ್ಯವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹಿರಿಯರಿಂದ ಕಿರಿಯರಿಗೆ ಸಂಸ್ಕೃತಿಯ ಅರಿವನ್ನು ವರ್ಗಾಯಿಸುವುದರ ಜೊತೆಗೆ ಕುಟುಂಬ ಮತ್ತು ಸಮಾಜದಲ್ಲಿ ಪರಸ್ಪರ ಗೌರವ, ಸಹಕಾರ ಹಾಗೂ ಸೌಹಾರ್ದತೆಯನ್ನು ಬೆಳೆಸಲು ನೆರವಾಗುತ್ತವೆ ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಗುರುರಾಜ್ ನಾಯಕ್, ಜಿಲ್ಲಾ ಸಮಿತಿ ಸದಸ್ಯ ಬಲಭೀಮರಾವ್ ಕುಲಕರ್ಣಿ, ಲಕ್ಷ್ಮಣ ನಾಯಕ್ ಮಾತನಾಡಿದರು. ರಾಚಯ್ಯಸ್ವಾಮಿ ಗಣಾಚಾರಿ ಪುರಾಣ ಪಠಣ ಮಾಡಿದರು. ರಾಮಲಿಂಗಯ್ಯಸ್ವಾಮಿ ಗಣಾಚಾರಿ ಪ್ರವಚನಕಾರರು, ಹಾರ್ಮೋನಿಯಂ ಶರಣಪ್ಪ ಹುಲ್ಲೂರು, ಗಣೇಶ್ ರಾಯಚೂರು ಡೋಲಕ್ ನುಡಿಸಿದರು.