ಸತ್ಯ ಶೋಧನೆಯೇ ವಿಜ್ಞಾನದ ಗುರಿ: ಎಸ್.ಹರ್ಷ

| Published : Mar 06 2025, 12:31 AM IST

ಸತ್ಯ ಶೋಧನೆಯೇ ವಿಜ್ಞಾನದ ಗುರಿ: ಎಸ್.ಹರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ವಿಜ್ಞಾನದ ಅವಿಷ್ಕಾರಗಳು ಅವಿಷ್ಕಾರಗಳಾಗಿ ಉಳಿಯದೇ, ಪ್ರತಿದಿನದ ಬದುಕಿನಲ್ಲಿ ಪ್ರಾಯೋಗಿಕವಾಗಿ ಬಳಕೆಯಾದಾಗ ಮಾತ್ರ ಸಂಶೋಧನೆ ಸಾರ್ಥಕತೆಯಾಗುತ್ತದೆ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರಳ ನಿದರ್ಶನಗಳ ಮೂಲಕ ವಿಜ್ಞಾನವನ್ನು ಅರ್ಥೈಸಬೇಕು. ವಿಷಯದ ಕ್ಲಿಷ್ಟತೆ ಮತ್ತು ಸರಳತೆ ಬೋಧಿಸುವವರ ಮೇಲೆ ನಿರ್ಧಾರವಾಗುತ್ತದೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಸತ್ಯ ಶೋಧನೆಯೇ ವಿಜ್ಞಾನದ ಗುರಿ ಎಂದು ನಂಜನಗೂಡು ತಾಲೂಕಿನ ಹೆಡತಲೆಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್.ಹರ್ಷ ಹೇಳಿದರು.

ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ವಿಜ್ಞಾನದ ಅವಿಷ್ಕಾರಗಳು ಅವಿಷ್ಕಾರಗಳಾಗಿ ಉಳಿಯದೇ, ಪ್ರತಿದಿನದ ಬದುಕಿನಲ್ಲಿ ಪ್ರಾಯೋಗಿಕವಾಗಿ ಬಳಕೆಯಾದಾಗ ಮಾತ್ರ ಸಂಶೋಧನೆ ಸಾರ್ಥಕತೆಯಾಗುತ್ತದೆ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರಳ ನಿದರ್ಶನಗಳ ಮೂಲಕ ವಿಜ್ಞಾನವನ್ನು ಅರ್ಥೈಸಬೇಕು. ವಿಷಯದ ಕ್ಲಿಷ್ಟತೆ ಮತ್ತು ಸರಳತೆ ಬೋಧಿಸುವವರ ಮೇಲೆ ನಿರ್ಧಾರವಾಗುತ್ತದೆ, ಆದ್ದರಿಂದ ಶಿಕ್ಷಕ ಸದಾ ಸಂಶೋಧಕನಾಗಿ ಹೊಸ ಹೊಸ ಬೋಧನಾ ವಿಧಾನಗಳನ್ನು ಕಂಡುಕೊಂಡು ಬೋಧಿಸಿದಾಗ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಆಸಕ್ತಿ ಉಂಟಾಗುತ್ತದೆ.ಈ ದಿಕ್ಕಿನಲ್ಲಿ ವಿಜ್ಞಾನದ ಸಂಶೋಧನೆ ಪ್ರಗತಿ ಕುಂಠಿತವಾಗಿದ್ದು, ಸರ್ ಸಿ.ವಿ.ರಾಮನ್‌ ಅವರು ನೋಬೆಲ್ ಪುರಸ್ಕೃತರಾದ ನಂತರ ಇದುವರೆಗೂ ವಿಜ್ಞಾನ ಕ್ಷೇತ್ರದಲ್ಲಿ ಯಾವುದೇ ಭಾರತೀಯರು ಈ ಪುರಸ್ಕಾರಕ್ಕೆ ಭಾಜನರಾಗಿರುವುದಿಲ್ಲ, ಹಾಗಾಗಿ ಶಿಕ್ಷಕರಾಗುವ ತಾವುಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವವನ್ನು ಬೆಳಸಿ, ದೇಶದ ಪ್ರಗತಿಗೆ ಪೂರಕವಾಗುವಂತೆ ವಿಜ್ಞಾನವನ್ನು ಬಳಸಿಕೊಳ್ಳಲು ಜಾಗೃತರಾಗುವಂತೆ ಮಾಡಬೇಕು ಎಂದರು.

ಸುತ್ತೂರಿನ ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ವಿಜ್ಞಾನದಿಂದ ವಿಕಾಸ, ವಿಜ್ಞಾನದಿಂದಲೇ ವಿನಾಶ ಹಾಗಾಗಿ ವಿಜ್ಞಾನದ ಅವಿಷ್ಕಾರಗಳನ್ನು ಅಭಿವೃದ್ಧಿಗೆ ಬಳಸಿಕೊಂಡು, ಪ್ರಕೃತಿ ನಿಯಮಗಳಿಗೆ ಬದ್ಧರಾಗಿ ಬದುಕುವ ಕಲೆಯನ್ನು ರೂಢಿಸಿಕೊಂಡು, ಜ್ಞಾನ ಸಂಪಾದನೆಯೊಂದಿಗೆ ಮಾದರಿ ಶಿಕ್ಷಕರಾಗಬೇಕು ಎಂದು ಶಿಕ್ಷಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ ಮಾತನಾಡಿ, ಪ್ರಸ್ತುತ ದಿನಮಾನಗಳು ತಂತ್ರಜ್ಞಾನದ ದಿನಗಳಾಗಿದ್ದು, ಅದರ ಜ್ಞಾನವನ್ನು ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಕವಾಗಿ ಶಿಕ್ಷಕರು ಬಳಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ. ಮಹೇಶ್ ಅವರು ವಿದ್ಯಾರ್ಥಿಗಳಲ್ಲಿ ಶೋಧನಾತ್ಮಕ ಮನೋಭಾವವಿರಬೇಕು. ನಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕೌತುಕವನ್ನು ಅರಿಯುವ ಕುತೂಹಲವನ್ನು ಬೆಳಸಬೇಕು, ಸರಿಯಾದ ಉದ್ದೇಶದೊಂದಿಗೆ ವಿಜ್ಞಾನದ ಕಲಿಕೆಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದರು.

ಸಹಾಯಕ ಪ್ರಾಧ್ಯಾಪಕ ಎನ್.ನಾಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪ್ತಿ ಆರ್.ಸಹನಾ ಪ್ರಾರ್ಥಿಸಿದರು, ಶ್ರೀದೇವಿ ಸ್ವಾಗತಿಸಿದರು. ಟಿ.ಪಿ.ಲಲಿತ್ ವಂದಿಸಿದರು, ಶಮಯಾಸ್ಮೀನ್ ಕಾರ್ಯಕ್ರಮ ನಿರೂಪಿಸಿದರು.