ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಹೆಣ್ಣು-ಗಂಡು ಎಂಬ ತಾರತಮ್ಯ ತೋರದೆ ಮಕ್ಕಳನ್ನು ಸುಸಂಸ್ಕೃತರಾಗಿ ರೂಪಿಸುವ ಹೊಣೆಗಾರಿಕೆ ತಂದೆ-ತಾಯಿಯರದಾಗಿದ್ದು, ಮಕ್ಕಳ ಮೇಲೆ ಸಂಪೂರ್ಣ ಕಾಳಜಿ ಮುಖ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅಭಿಪ್ರಾಯಪಟ್ಟರು.ಅಂಕನಹಳ್ಳಿ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ‘ಮಹಿಳಾ ಮಿಲನ’ ಕಾರ್ಯಕ್ರಮದ ‘ಧರ್ಮ-ಸಂಸ್ಕೃತಿ-ಮಹಿಳೆ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮೊಬೈಲ್-ಕಂಪ್ಯೂಟರ್ ಗೀಳಿನಿಂದ ಹೊರಬರುವ ಹಾಗೇ ಪೋಷಕರು ನೀತಿಕಥೆಗಳನ್ನು ಹೇಳಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ನಾಯಕತ್ವದ ಗುಣ ಬೆಳೆಸಬೇಕು. ಸಮಾಜದಲ್ಲಿ ಧರ್ಮ, ಸಂಸ್ಕೃತಿ ಉಳಿಸಬೇಕು ಎಂದರು.ಸಾಹಿತಿ ಶ.ಗ.ನಯನತಾರಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಧರ್ಮ ಮತ್ತು ಸಂಸ್ಕೃತಿ ನಮ್ಮ ದೇಶದ ಜೀವಾಳವಾಗಿದ್ದು, ಅವುಗಳಲ್ಲಿ ಮಹಿಳೆ ಮಹತ್ತರ ಪಾತ್ರ ವಹಿಸುತ್ತಾಳೆ. ಮಠಮಾನ್ಯಗಳಿಂದಾಗಿ ಇಂದು ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿ ಉಳಿದಿದೆ ಎಂದ ಅವರು, ಮಠದಲ್ಲಿ ಆಯೋಜಿಸಿರುವ ಮಹಿಳಾ ಮಿಲನ ಕಾರ್ಯಕ್ರಮ ಮಹಿಳಾ ಸಮಾನತೆಯನ್ನು ಪ್ರತಿಪಾದಿಸುವಂತಿದ್ದು, ಆಚಾರ-ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವಂತಿದೆ ಎಂದು ಹೇಳಿದರು.
ಬೆಂಗಳೂರಿನ ನ್ಯಾಯಾಧೀಶೆ ಜಯಶ್ರೀ ಅಧ್ಯಕ್ಷತೆ ವಹಿಸಿ, ದೇವರ ಕೃಪೆಯೊಂದಿಗೆ ಜ್ಞಾನ ದಾಸೋಹ ನಡೆಸುವ ಉದ್ದೇಶದಿಂದ ಮಠಾಧೀಶರು ಜಾತ್ರಾ ಮಹೋತ್ಸವದಲ್ಲಿ ನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಭಕ್ತರ ಮನೋಭಾವ ಬದಲಾಯಿಸುವ ಪ್ರಯತ್ನ ನಡೆದಿದೆ. ಪ್ರೀತಿ ತೋರಿಸುವ ಮೂಲಕ ಪೋಷಕರು ಮಕ್ಕಳನ್ನು ಮಾದಕ ದ್ರವ್ಯ ಸೇವನೆಯಿಂದ ದೂರವಿಡಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಬೇಕು ಎಂದರು.ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ರಾಣಿ ಮಾಚಯ್ಯ, ಹಾಕಿ ತರಬೇತುಗಾರ್ತಿ ದೇವರಾಜಮ್ಮ, ಸಾಹಿತಿಗಳಾದ ಶ.ಗ.ನಯನತಾರಾ, ಫ್ಯಾನ್ಸಿಮುತ್ತಣ್ಣ, ಜಲಾ ಕಾಳಪ್ಪ, ಶರ್ಮಿಳಾ ರಮೇಶ್, ಗೀತಾಂಜಲಿ, ಮುಖ್ಯಶಿಕ್ಷಕಿ ಪ್ರೇಮಾ, ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿ ಮಾಯಾ ಗಿರೀಶ್, ಸಮಾಜ ಸೇವಕಿ ಅನಿತಾ ತೋಟಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ತಪೋವನ ಕ್ಷೇತ್ರ ಮನೇಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಮಠಾಧೀಶ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ಚಂಗಡಹಳ್ಳಿ ಮಠಾಧೀಶ ಬಸವ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠಾಧೀಶ ಮಲ್ಲೇಶ ಸ್ವಾಮೀಜಿ, ಮಠದ ಕಾರ್ಯಕ್ರಮ ಆಯೋಜಕ ಎಸ್.ಮಹೇಶ್ ಹಾಗೂ ಕ್ಷೇತ್ರದ ಸ್ವಯಂ ಸೇವಕರು ಉಪಸ್ಥಿತರಿದ್ದರು.ಸಾಹಿತಿಗಳಾದ ಶರ್ಮಿಳಾ ರಮೇಶ್, ಗೀತಾಂಜಲಿ, ಮುಖ್ಯಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.