ಬೆಳೆ ದೃಢೀಕರಣದ ವೇಳೆ ರೈತರಿಗೆ ತಾರತಮ್ಯ

| Published : May 17 2025, 02:25 AM IST

ಸಾರಾಂಶ

ರೈತರ ಜಮೀನಿನ ಉತಾರದಲ್ಲಿ ಬೆಳೆ ನಮೂದ ಮಾಡಿದ್ದು, ತಾರತಮ್ಯವಾಗಿದ್ದು, ಸರ್ಕಾರದ ಯೋಜನೆಯಿಂದ ರೈತರು ವಂಚಿತರಾಗಿದ್ದಾರೆ ಎಂದು ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ್ ಕಡತ ಪರಿಶೀಲನೆ ಮಾಡಿ ತಿಳಿಸಿದರು.

ಶಿರಹಟ್ಟಿ: ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯಿಂದ ಬೆಳೆ ಹಾನಿ, ಬೆಳೆ ಪರಿಹಾರ ಸೌಲಭ್ಯ ಪಡೆಯಲು ರೈತರು ಬೆಳೆದ ಬೆಳೆಯ ದೃಢೀಕರಣದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ರೈತರ ಜಮೀನುಗಳಿಗೆ ಹೋಗಿ ಸ್ಥಾನಿಕ ಪರಿಶೀಲನೆ ಮಾಡದೇ ಕಾರ್ಯಾಲಯದಲ್ಲಿಯೇ ಕುಳಿತುಕೊಂಡು ರೈತರ ಜಮೀನಿನ ಉತಾರದಲ್ಲಿ ಬೆಳೆ ನಮೂದ ಮಾಡಿದ್ದು, ತಾರತಮ್ಯವಾಗಿದ್ದು, ಸರ್ಕಾರದ ಯೋಜನೆಯಿಂದ ರೈತರು ವಂಚಿತರಾಗಿದ್ದಾರೆ ಎಂದು ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ್ ಕಡತ ಪರಿಶೀಲನೆ ಮಾಡಿ ತಿಳಿಸಿದರು.

ಶುಕ್ರವಾರ ತಹಸೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಆಯಾ ಸಾಲಿನಲ್ಲಿ ರೈತರು ಬೆಳೆದ ಬೆಳೆಯ ನಿಖರ ಮಾಹಿತಿ ಕಂದಾಯ ಇಲಾಖೆ ಅಧಿಕಾರಿಗಳು ಉತಾರದಲ್ಲಿ ನಮೂದಿಸಿ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಜತೆಗೆ ರೈತರಿಗೆ ಬೆಳೆ ದೃಢೀಕರಣ ಪತ್ರ ನೀಡಬೇಕು. ಆದರೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ನೀಡಿದ ಮಾಹಿತಿ ನೋಡಿದರೆ ಗಾಬರಿಯಾಗುತ್ತದೆ ಎಂದರು.

ರೈತರು ಬೆಳೆದ ಬೆಳೆಯೇ ಬೇರೆ ಅಧಿಕಾರಿಗಳು ಉತಾರದಲ್ಲಿ ನಮೂದಿಸಿದ ಬೆಳೆಯೇ ಬೇರೆಯಾಗಿದ್ದು, ನಿಜವಾದ ರೈತರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು. ರೈತರು ಹಾಗೂ ಸಾರ್ವಜನಿಕರು ವಿವಿಧ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ಅರ್ಜಿಗಳ ವಿಲೇವಾರಿ ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ. ನಿತ್ಯವೂ ರೈತರು, ಸಾರ್ವಜನಿಕರು ಕಚೇರಿಗೆ ಅಲೆದಾಡುವಂತೆ ಮಾಡುತ್ತಿರುವುದು ಸರಿಯಲ್ಲ ಎಂದರು.

ತಹಸೀಲ್ದಾರ್ ಕಾರ್ಯಾಲಯದ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು. ವೃದ್ಧಾಪ್ಯ ವೇತನ ರದ್ದು ಮಾಡಿದ್ದು, ರದ್ದಾದ ಅರ್ಜಿ ಪರಿಶೀಲನೆ ಮಾಡಿದರೆ ಯಾವುದೇ ಸಮರ್ಪಕ ಕಾರಣವಿಲ್ಲದೇ ಅಧಿಕಾರಿಗಳು ರದ್ದುಪಡಿಸಿದ್ದನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಿಕಾರ್ಡ್‌ ರೂಂನಲ್ಲಿ ರೈತರು ಉತಾರ ಪಡೆಯಲು ಬಂದರೆ ಸರ್ಕಾರದ ನಿಯಮಾನುಸಾರ ಯಾವುದಕ್ಕೆ ಎಷ್ಟು ಫೀ ನಿಗದಿಪಡಿಸಲಾಗಿದೆ ಎಂಬ ಯಾವುದೇ ಮಾಹಿತಿಯನ್ನು ಕಚೇರಿ ಎದುರು ಹಾಕಿಲ್ಲ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವವರು ಮೂಲ ದಾಖಲಾತಿಗಳನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೊಟ್ಟು ಝರಾಕ್ಸ್ ಮಾಡಿಸಲು ಕಳುಹಿಸುತ್ತಿದ್ದು, ಸರ್ಕಾರದ ದಾಖಲೆಗಳು ಕಳೆದರೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.

ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡವರಿಸಿದರು. ಬೆಳೆ ದೃಢೀಕರಣ ಪತ್ರಕ್ಕೆ ಜಿಪಿಎಸ್ ಪೋಟೋ ಲಗತ್ತಿಸಿದ್ದು, ಎಲ್ಲ ರೈತರ ಉತಾರಕ್ಕೂ ಒಂದೇ ಬಗೆಯ ಪೋಟೋ ಲಗತ್ತಿಸಿದ್ದು, ಇದನ್ನು ಗಮನಿಸಿದರೆ ಅಧಿಕಾರಿಗಳು ಪರಿಶೀಲನೆ ಮಾಡದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಕಂಡುಬರುತ್ತದೆ ಎಂದರು.

ಆಯಾ ಸಾಲಿನಲ್ಲಿ ಋತುಮಾನಕ್ಕನುಗುಣವಾಗಿ ಬೆಳೆದ ಬೆಳೆ ಪರಿಶೀಲನೆ ಮಾಡಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ದೃಢೀಕರಣ ಪತ್ರ ಕೊಡಬೇಕಿದ್ದು, ಇದರಿಂದ ನಿಖರ ಅಂಕಿ ಅಂಶ ದೊರೆಯುತ್ತಿದ್ದು ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುತ್ತದೆ. ಆದರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಬೆಳೆಯೇ ಬೇರೆ, ಉತಾರದಲ್ಲಿ ನಮೂದಿಸಿದ್ದೇ ಬೇರೆ ಕಂಡು ಬರುತ್ತಿದ್ದು, ಹಿರಿಯ ಅಧಿಕಾರಿಗಳು ಗಮನಿಸಬೇಕು ಎಂದು ತಾಕೀತು ಮಾಡಿದರು.