ಮಕ್ಕಳು- ಶಿಕ್ಷಕರ ಅನುಪಾತದ ವಿಷಯದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳ ನಡುವೆ ತಾರತಮ್ಯ: ಚನ್ನಬಸಪ್ಪ

| Published : Dec 27 2024, 12:49 AM IST

ಮಕ್ಕಳು- ಶಿಕ್ಷಕರ ಅನುಪಾತದ ವಿಷಯದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳ ನಡುವೆ ತಾರತಮ್ಯ: ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮದು ಅನುದಾನಿತ ಕನ್ನಡ ಮಾಧ್ಯಮ ಶಾಲೆಯಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ 150ಕ್ಕೆ ಇಳಿದಿದೆ. ಇದರಿಂದ ಏಳು ಮಂದಿ ಇದ್ದ ಅನುದಾನಿತ ಶಿಕ್ಷಕರ ಸಂಖ್ಯೆಯನ್ನು ಕೂಡ ಕಡಿಮೆ ಮಾಡಲಾಗಿದೆ. ಆದರೆ ಆಡಳಿತ ವರ್ಗವೇ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪೋಷಕರ ಸಹಕಾರ ಬಹುಮುಖ್ಯ, ಎಲ್ಲಾ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ ಶೇ.100 ಫಲಿತಾಂಶ ಪಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳು ಮತ್ತು ಶಿಕ್ಷಕರ ಅನುಪಾತದ ವಿಷಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ನಡುವೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷರೂ ಆದ ಜ್ಯೋತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಚನ್ನಬಸಪ್ಪ ಆರೋಪಿಸಿದರು.

ಕಲಾಮಂದಿರದಲ್ಲಿ ಗುರುವಾರ ನಡೆದ ಕುವೆಂಪುನಗರ ಜ್ಯೋತಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಅನುದಾನಿತ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರಿರಬೇಕು ಎನ್ನುವವರು ಸರ್ಕಾರಿ ಶಾಲೆಗಳಲ್ಲಿ ಐವರು ವಿದ್ಯಾರ್ಥಿಗಳಿದ್ದರೂ ಒಬ್ಬ ಶಿಕ್ಷಕರನ್ನು ಮುಂದುವರೆಸುತ್ತಾರೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಶಿಕ್ಷಕರ ಹುದ್ದೆಗಳನ್ನೇ ಬೇರೆಡೆಗೆ ಸ್ಥಳಾಂತರಿಸುತ್ತಾರೆ ಎಂದರು.

ಈ ದ್ವಿಮುಖ ನೀತಿಯಿಂದಾಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸುವುದು ದುಸ್ತರವಾಗಿದೆ. ಕನ್ನಡ ಉಳಿಸಿ, ಬೆಳೆಸಬೇಕು. ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಹೇಳುವ ಸರ್ಕಾರ ಈ ರೀತಿಯ ತಾರತಮ್ಯನೀತಿಯನ್ನು ಕೈಬಿಡಬೇಕು ಎಂದು ಅವರು ಮನವಿ ಮಾಡಿದರು.

ನಮ್ಮದು ಅನುದಾನಿತ ಕನ್ನಡ ಮಾಧ್ಯಮ ಶಾಲೆಯಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ 150ಕ್ಕೆ ಇಳಿದಿದೆ. ಇದರಿಂದ ಏಳು ಮಂದಿ ಇದ್ದ ಅನುದಾನಿತ ಶಿಕ್ಷಕರ ಸಂಖ್ಯೆಯನ್ನು ಕೂಡ ಕಡಿಮೆ ಮಾಡಲಾಗಿದೆ. ಆದರೆ ಆಡಳಿತ ವರ್ಗವೇ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪೋಷಕರ ಸಹಕಾರ ಬಹುಮುಖ್ಯ, ಎಲ್ಲಾ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ ಶೇ.100 ಫಲಿತಾಂಶ ಪಡೆಯುತ್ತಿದೆ ಎಂದು ಅವರು ಹೇಳಿದರು.

ವಾರ್ಷಿಕೋತ್ಸವ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇದು ಅವಕಾಶಗಳ ಯುಗ. ಚೆನ್ನಾಗಿ ಓದಿ, ವಿಶ್ವದ ಎಲ್ಲಿ ಬೇಕಾದರೂ ಉದ್ಯೋಗ ಪಡೆಯಬಹುದು ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಮುದ್ದುವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸುನಂದಮ್ಮ ಮರಿಬಸವಸ್ವಾಮಿ, ಎನ್ . ಶೈಲೇಶ್ ಕುಮಾರ್, ಎಸ್. ನಟರಾಜು, ಸುಧಾಕರ್, ಪ್ರಣಮ್ಯ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸವಿತಾ ಪಿ. ಪುಟ್ಟೇಗೌಡ, ಪಿಯು ಕಾಲೇಜು ಪ್ರಾಂಶುಪಾಲ ಡಾ.ಭರತ್ ರಾಜ್ ಮುಖ್ಯ ಅತಿಥಿಗಳಾಗಿದ್ದರು.

ಆಡಳಿತಾಧಿಕಾರಿ ಅರವಿಂದ್ ಸ್ವಾಗತಿಸಿದರು. ಶೀಲಾ ನಿರೂಪಿಸಿದರು. ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.