ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸರಣಿ ಅಪಘಾತದ ನೋವುಗಳು, ಮುರುಘಾಶ್ರೀ ಮೇಲಿನ ಫೋಕ್ಸೋ ಪ್ರಕರಣ ಖುಲಾಸೆ, ಶಾಸಕ ವೀರೇಂದ್ರ ಪಪ್ಪಿ ಜೈಲು ಪಾಲಾದ ಸನ್ನಿವೇಶನದ ನಡುವೆ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಅನುದಾನ ನೀಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸಿದ ತಾರತಮ್ಯ ಧೋರಣೆ ವರ್ಷವಿಡೀ ಕಾಡಿದ್ದು 2025 ರ ಚಿತ್ರದುರ್ಗದ ಹಿನ್ನೋಟ.2022-23ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಭರವಸೆ ನೀಡಲಾಗಿತ್ತು. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಯೋಜನೆಗ ಹಣ ವ್ಯಯ ಮಾಡದೆ ದಿವ್ಯ ನಿರ್ಲಕ್ಷ್ಯ ತಾಳಿದ ಪರಿಣಾಮ ಬಾಕಿ ಬಿಲ್ಲುಗಳ ಭಾರಕ್ಕೆ ಇಡೀ ಯೋಜನೆಯೇ ಕುಸಿದಿತ್ತು. ಕಾಮಗಾರಿ ಮುಂದುವರಿಸಲು ಸಾಧ್ಯವಾಗದೆ ಗುತ್ತಿಗೆದಾರರು ಪಲಾಯನ ಮಾಡಿದ್ದು 2025 ರ ಹೈಲೈಟ್ಸ್. ಜಿಲ್ಲೆಯ ರೈತಾಪಿ ಸಮುದಾಯ ಅನುದಾನಕ್ಕೆ ಹೋರಾಟ ನಡೆಸಿದರೂ ಕಿವಿ ಗೊಡಲಾಗಿಲ್ಲ.
ಈ ಶತಮಾನದಲ್ಲಿ ನಾಲ್ಕನೇ ಬಾರಿಗೆ ಹೊಸದುರ್ಗ ತಾಲೂಕಿನ ವಿವಿಸಾಗರ ಜಲಾಶಯ ತುಂಬಿ ಕೋಡಿ ಬಿದ್ದಿದೆ. 2025 ರಲ್ಲಿ ಎರಡು ಬಾರಿ ತುಂಬಿದ್ದು ವಿಶೇಷ. ಭದ್ರಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ಜಲಾಶಯ ಭರ್ತಿ ಮಾಡಲಾಗಿತ್ತು. ಬಾಗಿನ ಸಮರ್ಪಣೆ ಮಾಡಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಭದ್ರಾ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡದೆ ಕೇಂದ್ರದ ಅನುದಾನ ನೀಡಿಲ್ಲವೆಂದು ದೂಷಿಸಿ ಹೋಗಿದ್ದರು. ಈ ವರ್ಷ ಕನಿಷ್ಟ ಮುನ್ನೂರು ಕೋಟಿ ರೂಪಾಯಿ ಅನುದಾನವ ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಸಂಕಷ್ಟದ ನಡುವೆ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಬಳಿ ಕಾಲುವೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಆತಂಕ ನಿವಾರಣೆ ಆಗಿರುವುದು ಸಂತಸದ ಸಂಗತಿ.ವಿವಿ ಸಾಗರ ಜಲಾಶಯ ಭರ್ತಿಯಾದ ಹಿನ್ನಲೆ ಹಿನ್ನೀರು ವ್ಯಾಪಿಸಿ ಹೊಸದುರ್ಗ ತಾಲೂಕಿನ ರೈತಾಪಿ ಸಮುದಾಯ ಸಂಕಷ್ಟ ಸನ್ನಿವೇಶ ಎದುರಿಸುತ್ತು. ಜಮೀನು ಹಾಗೂ ತೋಟಗಳಿಗೆ ನೀರು ಸುತ್ತುವರಿದು ಫಸಲು ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ವಿವಿ ಸಾಗರ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಅಳವಡಿಸುವ ಪ್ರಸ್ತಾಪ ಮತ್ತೆ ಕೇಳಿ ಬಂದಿತ್ತಾದರೂ ಈ ನಿಟ್ಟಿನ ಗಂಭೀರ ಪ್ರಯತ್ನಗಳು ನೇಪಥ್ಯಕ್ಕೆ ಸರಿದಿದ್ದು ಗಮನಾರ್ಹ.
ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರವಾಗಿ ಎರಡು ಪ್ರಮುಖ ಸಮಾವೇಶಕ್ಕೆ ಚಿತ್ರದುರ್ಗ ಸಾಕ್ಷಿಯಾಯಿತು. ವರ್ಷದ ಆರಂಭದಲ್ಲಿ ಮುರುಘಾಮಠದಲ್ಲಿ ಎರಡು ದಿನಗಳ ಕಾಲ ಶರಣ ಸಾಹಿತ್ಯ ಸಮ್ಮೇಳನ ಜರುಗಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜಿಸಿದ್ದು ವಿಶೇಷವಾಗಿದ್ದು ಮುರುಘಾಮಠದಿಂದ ಕೊಡಲ್ಬಡುವ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಸಿದ್ದರಾಮಶರಣ ಬೆಲ್ದಾಳರು ಸರ್ವಾಧ್ಯಕ್ಷರಾಗಿದ್ದು ವಿಶೇಷವಾಗಿತ್ತು. ಮಾರ್ಚ್ ತಿಂಗಳಲ್ಲಿ ಹೊಳಲ್ಕೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಮುರುಘಾ ಮಠದ ಅನುಭವ ಮಂಟಪದಲ್ಲಿ ನ.28ರಂದು ಬಸವ ಸಂಸ್ಕೃತಿ ಅಭಿಯಾನ ನಡೆಯಿತು. ಐದು ಸಾವಿರ ಮಹಿಳೆಯರು ವಚನಗಳನ್ನು ಹಾಡುವ ಮೂಲಕ ವಚನ ಝೇಂಕಾರ ಮಾಡಿದರು.ಚಿತ್ರದುರ್ಗ ಜಿಲ್ಲೆಯ ಎರಡು ಪ್ರಮುಖ ಮಠಗಳ ಪ್ರಾಂಗಣದಲ್ಲಿ ಒಂದಿಷ್ಟು ಸಂಚಲನಕ್ಕೆ 2025 ಸಾಕ್ಷಿಯಾಗಿತ್ತು. ತರಳಬಾಳು ಶ್ರೀ ಹಾಗೂ ಸಾಣಿಹಳ್ಳಿ ಶ್ರೀಗಳ ನಡುವೆ ಅಸಮಧಾನಗಳು ಮೂಡಿ ಪರಸ್ಪರ ದೂರವಾಗಿದ್ದರು. ಪ್ರತಿ ವರ್ಷ ಸಾಣೆಹಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ತರಳಬಾಳು ಶ್ರೀ ಪಿಟೀಲು ನುಡಿಸುತ್ತಿದ್ದರು. ವಿರಸದಿಂದಾಗಿ ಎರಡು ವರ್ಷ ತರಳಬಾಳು ಶ್ರೀ ಪಾಲ್ಗೊಂಡಿರಲಿಲ್ಲ. ಮುನಿಸು ತೊರೆದು ಈ ಬಾರಿ ಪಂಡಿತಾರಾಧ್ಯ ಶ್ರೀಗಳು ಖುದ್ದು ಸಿರಿಗೆರೆಗೆ ಆಗಮಿಸಿ ತರಳಬಾಳು ಶ್ರೀಗಳಿಗೆ ಆಹ್ವಾನ ನೀಡಲು ಮುಂದಾಗಿದ್ದರು. ಆದರೆ ತರಳಬಾಳು ಶ್ರೀ ಬೆಂಗಳೂರಿನಲ್ಲಿಯೇ ಉಳಿದಿದ್ದರಿಂದ ಉಭಯ ಶ್ರೀಗಳ ಸಮಾಗಮ ಆಗಲೇ ಇಲ್ಲ.
ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶಿವಮೂರ್ತಿ ಮುರುಘಾಶರಣರಿಗೆ ಚಿತ್ರದುರ್ಗ ನ್ಯಾಯಾಲಯ ಬಿಗ್ ರಿಲೀಪ್ ನೀಡಿತ್ತು. ಮೊದಲ ಪ್ರಕರಣದಲ್ಲಿ ನಿರ್ದೋಷಿ ಎಂದು ಕಳೆದ ನವೆಂಬರ್ 26 ರಂದು ಘೋಷಿಸಿತ್ತು. ಇದರ ನಡುವೆಯೇ ಅಕ್ರಮ ಆಸ್ತಿ ಸಂಪಾದನೆ, ಹಣ ವರ್ಗಾವಣೆ ಮೇರೆಗೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರನ್ನ ಜಾರಿ ನಿರ್ದೇಶನಾಲಯ ಆಗಸ್ಟ್ 22 ರಂದು ಬಂದಿಸಿ ಜೈಲಿಗೆ ಕಳಿಸಿತ್ತು. ನಾಲ್ಕು ತಿಂಗಳ ಕಾಲ ಅವರು ನ್ಯಾಯಾಂಗ ಬಂಧನ ಅನುಭವಿಸಬೇಕಾಯಿತು. ವರ್ಷದ ಆರಂಭದಿಂದ ಅಂತ್ಯದವರೆಗೂ ಸರಣಿ ಅಪಘಾತಗಳಿಗೆ ಚಿತ್ರದುರ್ಗ ಜಿಲ್ಲೆ ಸದ್ದು ಮಾಡಿತು. ಚಿತ್ರದುರ್ಗ ಹೊರವಲಯ ತಮಟಕಲ್ಲು ಬಳಿ ಮಾರ್ಚ್ 9ರಂದು ನಿಂತಿದ್ದ ಲಾರಿಗೆ ಇನೋವ ಕಾರು ಹಿಂಬದಿಯಿಂದ ಡಿಕ್ಕಿಯಾಗಿ ಬೆಂಗಳೂರಿನ ಐವರು ಮೃತಪಟ್ಟಿದ್ದರು. ಮತ್ತೊಂದು ಅಪಘಾತದಲ್ಲಿ ನಿಜಲಿಂಗಪ್ಪ ಸಮಾದಿ ಬಳಿ ಇನ್ನೋವಾ ಕಾರಿನ ಟೈರ್ ಸಿಡಿದು ತಮಿಳುನಾಡಿನ ಮೂವರು ಅಸು ನೀಗಿದ್ದರು.ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಬಳಿ ಅಳಿಯ ಅತ್ತೆ– ಮಾವನನ್ನು ಕೊಂದಿದ್ದು, ಸರ್ಕಾರಿ ಹಾಸ್ಟೆಲ್‌ನಲ್ಲಿದ್ದ ಪದವಿ ವಿದ್ಯಾರ್ಥಿನಿ ವರ್ಷಿತಾ ಕೊಲೆಯಾಗಿದ್ದು,ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕ ತಿಪ್ಪೇಸ್ವಾಮಿ ಎಂಬುವಾತ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕರಾಳ ಸನ್ನಿವೇಶಗಳಿಗೂ ಜಿಲ್ಲೆ ಸಾಕ್ಷಿಯಾಯಿತು.
ಡಿಸೆಂಬರ್ 25 ರಂದು ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಖಾಸಗಿ ಬಸ್ಸು ಹಾಗೂ ಕಂಟೈನರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಜನ ಸಜೀವ ದಹನವಾಗಿದ್ದು ರಾತ್ರಿ ವೇಳೆ ಪ್ರಯಾಣಿಸುವರಲ್ಲಿ ಆತಂಕ ಮೂಡಿಸಿತ್ತು.ಸರ್ಕಾರದಿರಂದ ನಿಜಲಿಂಗಪ್ಪರ ನಿವಾಸ ಖರೀದಿ:ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸ ಶ್ವೇತ ಭವನವ ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಖರೀದಿ ಮಾಡಿದ್ದು ನವೀಕರಣ ಮಾಡುವ ಕಾರ್ಯವ ಜಿಲ್ಲಾಡಳಿತ ಕೈಗೆತ್ತಿಕೊಂಡಿರುವುದು ಪ್ರಮುಖ ಸಂಗತಿಗಳಲ್ಲಿ ಒಂದು.