ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನುದಾನ ಹಂಚಿಕೆಯಲ್ಲಿ ಸರ್ಕಾರದ ತಾರತಮ್ಯ

| Published : Dec 10 2024, 12:33 AM IST

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನುದಾನ ಹಂಚಿಕೆಯಲ್ಲಿ ಸರ್ಕಾರದ ತಾರತಮ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆಯ ನೌಕರರ ಪಿಂಚಣಿಯ ₹58 ಕೋಟಿ ಅನುದಾನ ಹಲವು ವರ್ಷಗಳಿಂದ ಬಾಕಿಯಿದೆ. ಈ ಕಡತ ಸರ್ಕಾರದ ಬಳಿಯಿದ್ದು, ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಬೇಕು.

ಹುಬ್ಬಳ್ಳಿ:

ಹು-ಧಾ ಮಹಾನಗರ ಪಾಲಿಕೆಗೆ ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಸೋಮವಾರ ಪಾಲಿಕೆಯ ಬಿಜೆಪಿ ಸದಸ್ಯರು ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯ ನೇತೃತ್ವ ವಹಿಸಿದ್ದ ಪಾಲಿಕೆಯ ಸಭಾನಾಯಕ ವೀರಣ್ಣ ಸವಡಿ ಮಾತನಾಡಿ, ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ 1ನೇ ಹಂತದ (ಎಂ.ಜಿ.ಎನ್.ವೈ) ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಈ ಯೋಜನೆಯಲ್ಲಿ ₹200 ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ನ್ನು ಪಾಲಿಕೆಯಿಂದಲೇ ಕೈಗೊಳ್ಳಬೇಕಾಗಿದೆ. ಆದರೆ, ಈ ಟೆಂಡರ್ ಕರೆಯುವ ಅಧಿಕಾರವನ್ನು ರಾಜ್ಯ ಸರ್ಕಾರವು ಪೌರಾಡಳಿತ ನಿರ್ದೇಶನಾಲಯದ ಮೇರೆಗೆ ನೇರವಾಗಿ ಹಸ್ತಕ್ಷೇಪ ಮಾಡಿ ಟೆಂಡರ್ ಕರೆಯುತ್ತಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ ಸಂವಿಧಾನಿಕ ಅಧಿಕಾರವನ್ನು ಮೊಟಕುಗೊಳಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಜಿಎನ್‌ವೈ ಕಾಮಗಾರಿಗಳನ್ನು ಒಳಗೊಂಡಂತೆ ಎಲ್ಲ ಯೋಜನೆ, ಕಾಮಗಾರಿಗಳನ್ನು ಮಹಾನಗರ ಪಾಲಿಕೆಯ ವತಿಯಿಂದಲೇ ಅನುಷ್ಠಾನಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸದಸ್ಯರು ಒಪ್ಪಿಗೆ ನೀಡಿದ್ದರನ್ವಯ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್‌ ಮಾಡಲಾಗಿದೆ. ಈ ಕೂಡಲೇ ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ರಾಜ್ಯಪಾಲರು, ಮುಖ್ಯಮಂತ್ರಿ, ಸಭಾಪತಿಗಳಿಗೆ ಹಲವು ಬಾರಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ, ಈ ವರೆಗೂ ಸರ್ಕಾರ ಇದಕ್ಕೆ ಯಾವುದೇ ರೀತಿ ಸ್ಪಂದನೆ ದೊರಕಿಲ್ಲ. ಇದರಿಂದಾಗಿ ಪಾಲಿಕೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ದೂರಿದರು.

ಪಾಲಿಕೆಯ ನೌಕರರ ಪಿಂಚಣಿಯ ₹58 ಕೋಟಿ ಅನುದಾನ ಹಲವು ವರ್ಷಗಳಿಂದ ಬಾಕಿಯಿದೆ. ಈ ಕಡತ ಸರ್ಕಾರದ ಬಳಿಯಿದ್ದು, ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಚುನಾಯಿತ ಸದಸ್ಯರ ಸಂಖ್ಯೆ ಹೆಚ್ಚಾದ ಪ್ರಯುಕ್ತ ಹೊಸದಾಗಿ ಸಭಾಭವನ ಕಟ್ಟಲು ನೀಲನಕ್ಷೆ ತಯಾರಿಸಿದ್ದು, ಸರ್ಕಾರಕ್ಕೆ ₹30 ಕೋಟಿಯ ಪ್ರಸ್ತಾವನೆ ಸಲ್ಲಿಸಿದ್ದು, ಇದುವರೆಗೂ ಬಿಡುಗಡೆಗೊಳಿಸಿಲ್ಲ. ಮಹಾನಗರ ಪಾಲಿಕೆಗೆ ₹100 ಕೋಟಿ, 1, 2 ಮತ್ತು 3ನೇ ಹಂತದಲ್ಲಿ ಬಿಡುಗಡೆಯಾದ ಹಣದಲ್ಲಿ ಇನ್ನೂ ₹ 54 ಕೋಟಿ ಹಣ ಬಿಡುಗಡೆಯಾಗಿಲ್ಲ. ಇದನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಘನತಾಜ್ಯ ನಿರ್ವಹಣೆಗೆ ಪೌರಕಾರ್ಮಿಕರ ಕೊರತೆಯಿದ್ದು, ಅದನ್ನು ಸಮರ್ಪಕವಾಗಿ ನಿಭಾಯಿಸಲು 799 ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ಬೇಗನೆ ಕಡತ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಈ ವೇಳೆ ಪಾಲಿಕೆ ಮಾಜಿ ಮೇಯರ್‌ಗಳಾದ ಈರೇಶ ಅಂಚಟಗೇರಿ, ವೀಣಾ ಬರದ್ವಾಡ, ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಬೀರಪ್ಪ ಖಂಡೇಕರ, ರೂಪಾ ಶೆಟ್ಟಿ, ಪ್ರೀತಿ ಖೋಡೆ, ಶಾಂತಾ ಹಿರೇಮಠ ಸೇರಿದಂತೆ ಹಲವರಿದ್ದರು.ಸಿಎಂ ನಿವಾಸದ ಎದುರು ಧರಣಿ

ನಮ್ಮ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಚಳಿಗಾಲದ ಅಧಿವೇಶನದೊಳಗೆ ಈಡೇರಿಸುವಂತೆ ಈಗಾಗಲೇ ಸ್ಥಳೀಯ ಶಾಸಕರು, ಸಚಿವರಿಗೆ ಮನವಿ ಮಾಡಲಾಗಿದೆ. ಬೇಡಿಕೆ ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ. ಒಂದು ವೇಳೆ ಈಡೇರದಿದ್ದರೆ ಅಧಿವೇಶನದ ಬಳಿಕ ಪಾಲಿಕೆಯ ಎಲ್ಲ ಸದಸ್ಯರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸವಡಿ ನೀಡಿದರು.