- ಏಜೆನ್ಸಿಗಳಿಂದ ಗೃಹ ಬಳಕೆ ಸಿಲೆಂಡರ್ ದುಪ್ಪಟ್ಟು ದರಕ್ಕೆ ಮಾರಾಟ: ಆರೋಪ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ಕೆಲ ಗ್ಯಾಸ್ ಏಜೆನ್ಸಿಗಳು ಗ್ಯಾಸ್ ವಿತರಣೆಯಲ್ಲಿ ತಾರತಮ್ಯ ಅವ್ಯವಹಾರ ಮಾಡುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಎಚ್.ಪಿ. ಗ್ಯಾಸ್ ಸಿಲಿಂಡರ್ ವಿತರಿಸುವ ವಿತರಣಾ ಏಜೆನ್ಸಿಗಳು ಮೊದಲು ನೋಂದಾಯಿಸಿದ ಗ್ರಾಹಕರ ಸಂಖ್ಯೆ ಬಿಟ್ಟು ನಂತರ ನೋಂದಾಯಿಸಿದ ಸಂಖ್ಯೆಯ ಗ್ರಾಹಕರಿಗೆ ಮೊದಲು ಗ್ಯಾಸ್ ಸಿಲಿಂಡರ್ ವಿತರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಸರ್ಕಾರ ಮನೆ ಬಳಕೆಗೆ ಬೇರೆ ಹಾಗೂ ವಾಣಿಜ್ಯ ಬಳಕೆಗೆ ಪ್ರತ್ಯೇಕ ಸಿಲಿಂಡರ್ ಎಂದು ನಿಗದಿ ಮಾಡಿದ್ದರೂ, ಮನೆ ಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ ಬಳಸುತ್ತಿರುವುದು ಕಂಡುಬರುತ್ತಿದೆ ಎನ್ನುವುದು ಜನರ ಆರೋಪ.
ಗ್ಯಾಸ್ ಸಿಲಿಂಡರ್‌ಗಳನ್ನು ಮನೆ ಮನೆಗೆ ತೆರಳಿ ವಿತರಿಸಬೇಕಾದ ಏಜೆನ್ಸಿಗಳು ತಮ್ಮ ಅಂಗಡಿಗಳ ಮುಂದೆಯೇ ಸಿಲಿಂಡರ್ ಬದಲಾಯಿಸಿ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಲಕ್ಷ್ಮೀ ಏಜೆನ್ಸಿ ಬಳಿ ಖಾಲಿ ಸಿಲಿಂಡರ್‌ಗಳೊಂದಿಗೆ ಸಾಲುಗಟ್ಟಿದ್ದ ಗ್ರಾಹಕರು ಶನಿವಾರ ಗಲಾಟೆ ನಡೆಸಿದ್ದಾರೆ.
ಮಧ್ಯಪ್ರಾಚ್ಯದ ದೇಶದಲ್ಲಿ ನಡೆಯುತ್ತಿರುವ ಯುದ್ಧ ಹಿನ್ನೆಲೆ ಈಗಾಗಲೇ ಮನೆ ಹಾಗೂ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಲಭ್ಯತೆ ಪ್ರಮಾಣ ಇಳಿಕೆಯಾಗಿದ್ದನ್ನೇ ಬಂಡವಾಳ ಮಾಡಿಕೊಂಡಿರುವ ಗ್ಯಾಸ್ ಏಜೆನ್ಸಿಗಳು ಮನೆ ಬಳಕೆಯ ಸಿಲೆಂಡರ್‌ಗಳನ್ನು ದುಪ್ಪಟ್ಟು ದರಕ್ಕೆ ಮಾರಿಕೊಳ್ಳುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.
ನಗರ ಹಾಗೂ ಗ್ರಾಮಾಂತರ ಪ್ರದೇಶದ ಹೋಟೆಲ್‌ಗಳಲ್ಲಿ ಅಕ್ರಮವಾಗಿ ಮನೆ ಬಳಕೆಯ ಸಿಲಿಂಡರ್ ಬಳಕೆಯಾಗುತ್ತಿವೆ. ಕೆಲ ಸಿಲಿಂಡರ್‌ಗಳು ದಾವಣಗೆರೆಯಿಂದ ಅಕ್ರಮವಾಗಿ ಬರುತ್ತಿವೆ ಎಂಬ ಗುಮಾನಿಯೂ ಇದೆ. ಆದರೆ, ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕಾದ ಆಹಾರ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬರುತ್ತಿದೆ.ಸಹಾಯವಾಣಿ ಸೌಲಭ್ಯವೇ ಇಲ್ಲ:
ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿ ಹಿನ್ನೆಲೆ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟ ಹಾಗೂ ಅಕ್ರಮ ದಾಸ್ತಾನು ಆಗದಂತೆ ಪೊಲೀಸ್, ಸಾರಿಗೆ, ಆಹಾರ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಜತೆಗೆ, ಅಡುಗೆ ಅನಿಲ ಬಗ್ಗೆ ಜನರ ಅಹವಾಲು ಹಾಗೂ ದೂರು ಆಲಿಸಲು ಆಹಾರ ಇಲಾಖೆಯಿಂದ ಕೂಡಲೇ ಸಹಾಯವಾಣಿ ಪ್ರಾರಂಭಿಸಬೇಕೆಂದು ತಿಳಿಸಿದ್ದಾರೆ. ಆದರೆ ಇದ್ಯಾವುದು ಇಲ್ಲಿ ನಡೆಯುತ್ತಿಲ್ಲ.ತಕ್ಷಣ ತಾಲೂಕು ಆಡಳಿತ ಗ್ಯಾಸ್ ಸಿಲಿಂಡರ್ ಮಾರಾಟದ ಏಜೆನ್ಸಿಗಳ ಮಾಲಿಕರ ಸಭೆ ಕರೆಯಬೇಕು. ಅವರಿಗೆ ಅಂಗಡಿ, ಏಜೆನ್ಸಿ ಮುಂದೆ, ರಸ್ತೆ, ಖಾಲಿ ಸೈಟುಗಳಲ್ಲಿ ಸಿಲೆಂಡರ್ ವಿತರಿಸದಂತೆ, ನೇರ ಹೋಂ ಡೆಲಿವರಿ ಮಾಡುವಂತೆ ಮೊದಲು ನೋಂದಣಿಯಾಗುವ ಗ್ರಾಹಕರಿಗೆ ಮೊದಲು ಸಿಲಿಂಡರ್ ವಿತರಿಸುವಂತೆ, ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡದಂತೆ ಎಚ್ಚರಿಸಬೇಕಿದೆ. ತಾಲೂಕಿನಲ್ಲಿ ಸಿಲಿಂಡರ್ ಲಭ್ಯತೆ ನೋಂದಣಿಯಾದ ಹಾಗೂ ವಿತರಣೆಯಾದ ಸಿಲಿಂಡರ್ ಬಗ್ಗೆ ಪತ್ರಿಕೆಗಳಿಗೆ ಮಾಹಿತಿ ನೀಡಬೇಕಿದೆ.
- - - (ಕೋಟ್) ಮೈಸೂರು ಕಿರ್ಲೋಸ್ಕರ್ ಎಂಪ್ಲಾಯಿಸ್ ಸೊಸೈಟಿಯ ಗ್ಯಾಸ್ ಏಜೆನ್ಸಿಯಲ್ಲಿ ಮಾ.11ರಂದು 614612 ಸಂಖ್ಯೆ ನೋಂದಣಿಯಾಗಿದೆ. ಅನಂತರ ಮಾ.13ಕ್ಕೆ ಬಿಲ್ ಜನರೇಟರ್ ಆಗಿ ಗ್ರಾಹಕ ಸಂಖ್ಯೆಗೆ ಒಟಿಪಿ ಬಂದಿದೆ. ನಂತರ ಒಂದೆರಡು ದಿನಗಳಲ್ಲಿ ಬರಬೇಕಾದ ಸಿಲಿಂಡರ್ ಬದಲು ನಿಮಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಆಗಿದೆ ಎಂದು ಮಾ.19ಕ್ಕೆ ಎಸ್‌ಎಂಎಸ್ ಬಂದಿದೆ. ಒಟಿಪಿ ಇಲ್ಲದೇ ಗ್ಯಾಸ್ ಸಿಲಿಂಡರ್ ಅದ್ಹೇಗೆ ವಿತರಣೆ ಆಗಿದೆ?.- ರವಿಶಂಕರ್ ಜಿ., ಗ್ರಾಹಕ, ಹರಿಹರ.
- - --22HRR.02:
ಹರಿಹರದ ಲಕ್ಷ್ಮೀ ಏಜೆನ್ಸಿ ಬಳಿ ಗ್ಯಾಸ್ ಸಿಲಿಂಡರ್‌ಗಾಗಿ ವಾಗ್ವಾದ ನಡೆಯುತ್ತಿದ್ದ ವೇಳೆ ಫುಡ್ ಇನ್‌ಸ್ಪೆಕ್ಟರ್ ನಜರುಲ್ಲಾ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರು.