ಅನುದಾನ ಹಂಚಿಕೆಯಲ್ಲಿ ತಾರತಮ್ಯ ಜಾಲಿ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರ ಧರಣಿ

| Published : Sep 03 2024, 01:32 AM IST

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಜಾಲಿ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿಯ ಕ್ರಿಯಾಯೋಜನೆ ಮಾಡುವ ಸಂದರ್ಭದಲ್ಲಿ ನಮಗೆ ಮಾಹಿತಿ ನೀಡುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಮುಂದೆ ನೀಡಲಾಗುವುದು ಎಂಬ ಸಬೂಬು ಹೇಳಲಾಗುತ್ತಿದೆ ಎಂದು ಪಪಂ ಸದಸ್ಯರು ಆರೋಪಿಸಿದರು.

ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಅನುದಾನ ಹಂಚಿಕೆ ತಾರತಮ್ಯ ವಿರೋಧಿಸಿ ಬಿಜೆಪಿ ಮೂವರು ಸದಸ್ಯರು ಸೊಮವಾರ ಪಟ್ಟಣ ಪಂಚಾಯಿತಿ ಎದುರು ಧರಣಿ ನಡೆಸಿ ವಾರ್ಡ್‌ನ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಆಗ್ರಹಿಸಿದರು.

ಸರ್ಕಾರದಿಂದ ಜಾಲಿ ಪಟ್ಟಣ ಪಂಚಾಯಿತಿಗೆ ಬಂದ ಅನುದಾನವನ್ನು ಬಿಜೆಪಿ ಸದಸ್ಯರ ವಾರ್ಡ್‌ಗಳಾದ ೯ರ ಜಾಲಿ ಜನತಾ ಮನೆ, ವಾರ್ಡ್‌ 2ರ ಕಾರಗದ್ದೆ ಹಾಗೂ ವಾರ್ಡ್‌ 8ರ ದೊಡ್ಮನೆಗೆ ಅನುದಾನ ನೀಡಿಲ್ಲ ಎಂದು ಬಿಜೆಪಿ ಸದಸ್ಯರು ಶನಿವಾರ ತಹಸೀಲ್ದಾರ್ ನಾಗರಾಜ ನಾಯ್ಕಡಗೆ ಮನವಿ ಸಲ್ಲಿಸಿದ್ದರು.

ಸೋಮವಾರ ಬೆಳಗ್ಗೆ ನಡೆದ ಸದಸ್ಯರ ತುರ್ತು ಸಭೆಯಲ್ಲಿ ಅನುದಾನ ನೀಡಲು ನಿರಾಕರಿಸದ ಹಿನ್ನೆಲೆ ಪಟ್ಟಣ ಪಂಚಾಯಿತಿ ಮುಂದೆ ಅನುದಾನ ಹಂಚಿಕೆ ತಾರತಮ್ಯ ಖಂಡಿಸಿ ಧರಣಿ ನಡೆಸುವುದು ಅನಿವಾರ್ಯವಾಯಿತು ಎಂದು ಸದಸ್ಯ ದಯಾನಂದ ನಾಯ್ಕ ತಿಳಿಸಿದರು.

೨೦೨೧- ೨೨ನೇ ಸಾಲಿನಲ್ಲಿ ನಗರೋತ್ಥಾನ ಅನುದಾನವನ್ನು ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಹಂಚಲಾಗಿದ್ದು, ಕಾಮಗಾರಿ ಬಾಕಿ ಉಳಿದಿದೆ. ತುರ್ತು ಅಗತ್ಯತೆಯ ಕಾಮಗಾರಿಗೆ ಅನುದಾನ ಅವಶ್ಯಕತೆ ಇದ್ದಲ್ಲಿ ಆದ್ಯತೆಯ ಮೇರೆಗೆ ಪಟ್ಟಣ ಪಂಚಾಯಿತಿ ಹಣದಲ್ಲಿ ಕಾಮಗಾರಿ ಮಾಡಿಕೊಡಲು ಸಿದ್ಧರಿದ್ದೇವೆ ಎಂದು ಮುಖ್ಯಾಧಿಕಾರಿ ಮಂಜಪ್ಪ ತಿಳಿಸಿದ್ದಾರೆ. ಜಾಲಿ ಪಪಂಗೆ ಹೆಚ್ಚಿನ ಅನುದಾನ ಬಂದರೂ ನಮ್ಮ ವಾರ್ಡ್‌ಗಳಿಗೆ ಅನುದಾನ ನೀಡದೇ ತಾರತಮ್ಯ ಎಸಗಲಾಗಿದೆ.

ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿಯ ಕ್ರಿಯಾಯೋಜನೆ ಮಾಡುವ ಸಂದರ್ಭದಲ್ಲಿ ನಮಗೆ ಮಾಹಿತಿ ನೀಡುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಮುಂದೆ ನೀಡಲಾಗುವುದು ಎಂಬ ಸಬೂಬು ಹೇಳಲಾಗುತ್ತಿದೆ. ಜಾಲಿ ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರಂತೆ ನಮಗೂ ಅನುದಾನ ಪಡೆಯುವ ಹಕ್ಕಿದೆ. ನಾವೂ ಚುನಾಯಿತ ಸದಸ್ಯರಾಗಿದ್ದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದು ಸರಿಯಾದ ಕ್ರಮವಲ್ಲ.

ನಮ್ಮ ವಾರ್ಡನಲ್ಲೂ ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ನಾವು ಬಿಜೆಪಿಯವರು ಎಂದ ಮಾತ್ರಕ್ಕೆ ನಮ್ಮ ವಾರ್ಡ್‌ಗೆ ಅನುದಾನ ನಿರಾಕರಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, ನಮ್ಮ ವಾರ್ಡ್‌ಗೆ ಸಮರ್ಪಕ ಅನುದಾನ ಹಂಚಿಕೆ ಆಗುವ ತನಕ ನಮ್ಮ ಧರಣಿ ಮುಂದುವರಿಯಲಿದೆ ಎಂದು ಸದಸ್ಯ ದಯಾನಂದ ನಾಯ್ಕ ತಿಳಿಸಿದ್ದಾರೆ.