ಸಾರಾಂಶ
ಬಿಬಿಎಂಪಿಯು ತನ್ನ ಬಜೆಟ್‌ನಲ್ಲಿ ಹಳೆಯ ವಲಯಗಳಿಗೆ ಆರ್ಥಿಕ ವಿಕೇಂದ್ರಿಕರಣ ಮಾಡಿದೆ. ಆದರೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇದೇ ಮೊದಲ ಬಾರಿಗೆ ಬಿಬಿಎಂಪಿಯಲ್ಲಿ ವಲಯಗಳಿಗೆ ಆರ್ಥಿಕ ವಿಕೇಂದ್ರೀಕರಣ ಮಾಡಲಾಗಿದೆ. ಅದರ ಮೂಲಕ ವಲಯಗಳ ದೈನಂದಿನ ನಿರ್ವಹಣೆಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಕೇಂದ್ರ ವಿಭಾಗ ಹೊರತುಪಡಿಸಿ ಉಳಿದ 8 ವಲಯಗಳ ಪೈಕಿ ಹಳೇ ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಿಗೆ ಹೆಚ್ಚಿನ ಅನುದಾನ ನಿಗದಿ ಮಾಡಲಾಗಿದೆ.ವಲಯವಾರು ಅನುದಾನ ನಿಗದಿಯಲ್ಲಿ ಹಳೇ ಮತ್ತು ಹೊಸ ವಲಯಗಳಲ್ಲಿ ತಾರತಮ್ಯ ಮಾಡಲಾಗಿದೆ. ವಲಯಗಳಿಗೆ ಅಧಿಕಾರ ವಿಕೇಂದ್ರೀಕರಣ ನಂತರ ಇದೀಗ ಆರ್ಥಿಕ ವಿಕೇಂದ್ರೀಕರಣ ಮಾಡಲಾಗಿದೆ. ಅದರಂತೆ ದೈನಂದಿನ ಆಡಳಿತಾತ್ಮಕ ವೆಚ್ಚ, ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಹಾಗೂ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಆಯಾ ವಲಯದಲ್ಲಿಯೇ ಹಣ ಬಿಡುಗಡೆ ಮಾಡುವ ಅಧಿಕಾರ ನೀಡಲಾಗಿದೆ. ಆದರೆ, ಹೀಗೆ ಆರ್ಥಿಕ ವಿಕೇಂದ್ರೀಕರಣ ಮಾಡುವ ಸಂದರ್ಭದಲ್ಲಿ ಪೂರ್ವ, ಪಶ್ಚಿಮ, ದಕ್ಷಿಣ ವಲಯಕ್ಕೆ ಹೆಚ್ಚಿನ ಅನುದಾನ ನಿಗದಿ ಮಾಡಲಾಗಿದೆ. ಉಳಿದ 5 ವಲಯಗಳಿಗೆ ಅವುಗಳಿಗಿಂತ ಶೇ.50ರಷ್ಟು ಕಡಿಮೆ ಅನುದಾನ ಮೀಸಲಿಡುವುದಾಗಿ ಹೇಳಲಾಗಿದೆ. ಆ ಮೂಲಕ ವಲಯವಾರು ಅನುದಾನ ನೀಡುವಲ್ಲಿ ವ್ಯತ್ಯಾಸ ಮಾಡಲಾಗಿದೆ.
ಬಿಬಿಎಂಪಿ ಅನುದಾನ ನಿಗದಿ ಮಾಡಿರುವಂತೆ ಪೂರ್ವ ವಲಯಕ್ಕೆ ₹525.19 ಕೋಟಿ, ಪಶ್ಚಿಮ ₹501.17 ಕೋಟಿ, ದಕ್ಷಿಣ ₹495.96 ಕೋಟಿ, ಯಲಹಂಕ ₹167.19 ಕೋಟಿ, ಮಹದೇವಪುರ ₹249.51 ಕೋಟಿ, ಬೊಮ್ಮನಹಳ್ಳಿ ₹269.88 ಕೋಟಿ, ರಾಜರಾಜೇಶ್ವರಿನಗರ ₹235.75 ಕೋಟಿ ಹಾಗೂ ದಾಸರಹಳ್ಳಿ ವಲಯಕ್ಕೆ ₹124.25 ಕೋಟಿ ಅನುದಾನ ನಿಗದಿ. ಅದನ್ನು ಹೊರತುಪಡಿಸಿ ಕೇಂದ್ರ ಕಚೇರಿಯಿಂದ ಕೈಗೊಳ್ಳುವ ಕಾಮಗಾರಿ, ನಿರ್ವಹಣಾ ವೆಚ್ಚಕ್ಕಾಗಿ ₹620.93 ಕೋಟಿ ನೀಡುವುದಾಗಿ ತಿಳಿಸಲಾಗಿದೆ. ಒಟ್ಟಾರೆ ಕೇಂದ್ರ ಕಚೇರಿ ಹಾಗೂ 8 ವಲಯಗಳಿಗೆ ಒಟ್ಟು ₹3,189.82 ಕೋಟಿ ಅನುದಾನ ಹಂಚಿಕೆ ಮಾಡುವುದಾಗಿ ಉಲ್ಲೇಖಿಸಲಾಗಿದೆ.