ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ನ್ಯಾಯಾಲಯದ ಮೊರೆ ಹೋಗಿರುವುದು ಎಲ್ಲರಿಗೂ ಸಮಾನ ಪರಿಹಾರ ಸಿಗುವಂತಾಗಲಿ ಎಂಬ ಕಾರಣಕ್ಕೆ. ಇದರಿಂದ ಅವರು ರಾಷ್ಟ್ರ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅಭಿಪ್ರಾಯಪಟ್ಟರು.ತಾಲೂಕಿನ ಕಾಮದೇನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ಕೇಸ್ ಮಾಡಿರುವುದರಿಂದ ಅದರ ಫಲಶ್ರುತಿಯಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಸಮಾನ ಅನುದಾನ ಸಿಗಲಿದೆ ಎಂದು ಹೇಳಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡುವುದರಲ್ಲಿ ಸ್ಪಷ್ಠ ತಾರತಮ್ಯ ತೋರುತ್ತಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ಶಾಸಕರೂ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸಲಿದ್ದೇವೆ. ಕಾಂಗ್ರೆಸ್ ಶಾಸಕರಿಗೆ ೨೫ ಕೋಟಿ ನೀಡಿದ್ದಾಗ ನಮಗೆ ೧೦ ಕೋಟಿಯಂತೆ ಘೋಷಿಸಿದ್ದರು. ನಂತರ ಅವರಿಗೆ ೫೦ ಕೋಟಿ ನೀಡಿದಾಗ ನಮಗೆ ೨೫ ಕೋಟಿಯಂತೆ ಘೋಷಿಸಿದ್ದರು. ಎಲ್ಲವೂ ಕೇವಲ ಕಾಗದಕ್ಕೆ ಸೀಮಿತ. ಯಾವ ಕ್ಷೇತ್ರಕ್ಕೂ ಒಂದು ರುಪಾಯಿಯನ್ನೂ ಕೊಟ್ಟಿಲ್ಲ ಎಂದು ಸ್ಪಷ್ಪಪಡಿಸಿದರು.ಮಾಲೂರು, ಕೋಲಾರ ಹಾಗೂ ಬಂಗಾರಪೇಟೆ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಅನುದಾನ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಸೇರಿಸಿ ಹೇಳುತ್ತಿದ್ದಾರೆ ಎಂದರು. ಅನುದಾನ ಕೊಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿತ್ತು. ಈಗ ನಾವು ಕೂಡ ಅವರದೇ ಮಾರ್ಗದಲ್ಲಿ ನಡೆದಿದ್ದೇವೆ. ಅನುದಾನಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದನ್ನು ಅವರೇ ಕಲಿಸಿದ್ದು ಎಂದರು.ನ್ಯಾಯಾಲಯದ ತೀರ್ಪು ಯಾವಾಗ ಬರಬಹುದು ಎಂಬ ಪ್ರಶ್ನೆಗೆ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ಪ್ರತಿಕ್ರಿಯಿಸಿ, ಇನ್ನೂ ಒಂದು ತಿಂಗಳೊಳಗೆ ತೀರ್ಪು ಬರಬಹುದು. ನಾನು ಹಾಕಿರುವ ಪ್ರಕರಣದಿಂದ ಎಲ್ಲ ಶಾಸಕರಿಗೂ ಸಮಾನ ಪರಿಹಾರ ಸಿಗಲಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲ ಅನುದಾನ ಪ್ರಕರಣಗಳಿಗೆ ಮಾದರಿಯಾಗಲಿದೆ ಎಂದು ಹೇಳಿದರು.
;Resize=(128,128))