ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೆ ಇರುವುದರಿಂದ ಹಲವು ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು.
ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಮಧ್ಯಂತರ ಬೆಳೆಹಾನಿ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಖಂಡನೀಯ. ಶೀಘ್ರದಲ್ಲಿ ಹಾಳಾದ ಬೆಳೆಗೆ ಬೆಳೆ ಪರಿಹಾರ ನೀಡಬೇಕು ಎಂದು ಸಮಗ್ರ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ ಹಾಗೂ ರೈತ ಹನಮಂತಪ್ಪ ಚಿಂಚಲಿ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು, ಶೇಂಗಾ ಹಾಗೂ ಮೆಣಸಿನಕಾಯಿ ಬೆಳೆಗಳು ಈ ವರ್ಷ ಸುರಿದ ಅತಿಯಾದ ಮಳೆಗೆ ಹಾಳಾದವು. ಸರ್ಕಾರ ಈ ಬೆಳೆಗಳಿಗೆ ಮಧ್ಯಂತರ ಪರಿಹಾರ ಘೋಷಣೆ ಮಾಡಿತ್ತು. ಆದರೆ ಅಧಿಕಾರಿಗಳು ಬೆಳೆಹಾನಿಯ ಸಮೀಕ್ಷೆ ಮಾಡುವಲ್ಲಿ ಮಾಡಿದ ಯಡವಟ್ಟು ಹಲವು ರೈತರ ಪಾಲಿಗೆ ಪರಿಹಾರ ಮರೀಚಿಕೆಯಾಗುವಂತೆ ಮಾಡಿದೆ.ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೆ ಇರುವುದರಿಂದ ಹಲವು ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಜಂಟಿ ಹೆಸರು ಇರುವ ಉತಾರಗಳಲ್ಲಿನ ಒಬ್ಬ ರೈತರಿಗೆ ಮಾತ್ರ ಹಣ ಜಮಾ ಮಾಡಿದ್ದಾರೆ. ಇನ್ನೊಬ್ಬರ ಹೆಸರಿಗೆ ಹಣ ಜಮೆ ಮಾಡಿಲ್ಲ. ಇದು ಅಣ್ಣ ತಮ್ಮರ ನಡುವೆ ಜಗಳ ತಂದಿಡುವಂತೆ ಮಾಡಿದೆ ಎಂದು ಆರೋಪಿಸಿದರು.
ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ, ಜಿಲ್ಲಾಧಿಕಾರಿ, ಎಸಿ ಹಾಗೂ ಕೃಷಿ ಇಲಾಖೆಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ತಾಲೂಕಿನಲ್ಲಿ ಹೇಳುವರು ಕೇಳುವರು ಯಾರು ಇಲ್ಲದಂತಾಗಿದೆ. ರೈತರಿಗೆ ಅಧಿಕಾರಿಗಳು ಸರಿಯಾಗಿ ಮಾರ್ಗದರ್ಶನ ಮಾಡುತ್ತಿಲ್ಲವೆಂದರು.ನಾಗರಾಜ ಚಿಂಚಲಿ ಮಾತನಾಡಿ, ಮಂಜಲಾಪುರದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ರೈತರ ಮೆಕ್ಕೆಜೋಳ ಸಂಪೂರ್ಣ ಬೆಂಕಿಗೆ ಅಹುತಿಯಾಗಿದ್ದು, ಕಂದಾಯ ಮತ್ತು ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದರೂ ಹೆಸ್ಕಾಂ ಇಲಾಖೆಯವರು ಕಂದಾಯ ಇಲಾಖೆಗೆ ಹಾನಿಯ ವರದಿ ನೀಡದಿರುವುದರಿಂದ ರೈತರಿಗೆ ಪರಿಹಾರ ದೊರೆತಿಲ್ಲ. ಕೂಡಲೇ ಕ್ರಮ ಕೈ ಗೊಳ್ಳಬೇಕು, ಮೆಕ್ಕೆಜೋಳ ಮಾರಾಟ ಮಾಡಿ ತಿಂಗಳು ಕಳೆಯುತ್ತ ಬಂದರೂ ರೈತರ ಅಕೌಂಟ್‌ಗೆ ಹಣ ಹಾಕಿಲ್ಲ. ಶೀಘ್ರದಲ್ಲಿ ರೈತರ ಖಾತೆಗೆಳಿಗೆ ಮೆಕ್ಕೆಜೋಳದ ಹಣ ಹಾಕುವ ಕಾರ್ಯ ಮಾಡಬೇಕು ಎಂದರು.ರೈತ ಮುಖಂಡ ಪೂರ್ಣಾಜಿ ಕರಾಟೆ ಮಾತನಾಡಿ, ಕಡಲೆ ಬೆಳೆ ಖರೀದಿ ಕೇಂದ್ರ ಬೇಗನೆ ಪ್ರಾರಂಭಿಸಬೇಕು. ಸರ್ಕಾರ ಖರೀದಿ ಕೇಂದ್ರದಲ್ಲಿ ಸರಳಿಕರಣ ಮಾಡಬೇಕು. ಖರೀದಿ ಕೇಂದ್ರದಲ್ಲಿ ಹೆಚ್ಚಿನ ಕೌಂಟರ್ ತೆಗೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟಾಕಪ್ಪ ಸಾತಪುತೆ, ಬಸವರಾಜ ಹಿರೇಮನಿ, ರವಿ ಸಾತಪುತೆ, ಸುರೇಶ ಹಟ್ಟಿ, ಎನ್.ಆರ್. ಸಾತಪುತೆ ಇದ್ದರು.