ಇಂದಿಗೂ ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನಿರ್ಧರಿಸುತ್ತದೆ ಎಂದು ವಿಷಾದಿಸಿದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ಮಹಿಳಾ ಸಮಾನತೆ ವಿಚಾರದಲ್ಲಿ ವಿಶ್ವದಾದ್ಯಂತ ತಾರತಮ್ಯ ನಡೆಯುತ್ತಿದೆ ಎಂದು ಮಾಯಸಂದ್ರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಆನಂದ ಮದನ ಹೇಳಿದರು.ತಾಲೂಕಿನ ಮಾಯಸಂದ್ರ ಗ್ರಾಮದ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಬಾಪೂ ಶಿಶುವಿಹಾರ ವತಿಯಿಂದ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷನಷ್ಟೇ ಸಾಮರ್ಥ್ಯ ಮಹಿಳೆ ಹೊಂದಿದ್ದರೂ, ಅವರನ್ನು ಕೀಳಾಗಿ ಕಾಣುವುದು ಮುಂದುವರಿದಿದೆ. ಮಹಿಳೆಯರು ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಆಕೆ ಕೇವಲ ಭೋಗದ ಅಥವಾ ಪುರುಷರ ಸೇವೆಗೆಂದೇ ಇರುವ ನಿರ್ಜೀವ, ನಿರ್ಭಾವ ವಸ್ತು ಎಂದೇ ಭಾವಿಸಲಾಗಿದೆ ಎಂದು ಕಿಡಿಕಾರಿದರು.ಇಂದಿಗೂ ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನಿರ್ಧರಿಸುತ್ತದೆ ಎಂದು ವಿಷಾದಿಸಿದರು.
ಉಪಾಧ್ಯಕ್ಷೆ ಲೀಲಾವತಿ ಗಿಡ್ಡಯ್ಯ ಮಾತನಾಡಿ, ಭಾರತ ಡಿಜಿಟಲ್ ಯುಗದಲ್ಲಿದ್ದರೂ ಮೌಢ್ಯದಿಂದ ಹೊರ ಬಂದಿಲ್ಲ. ಮಹಿಳೆಯನ್ನು ದೇವತೆ, ಭೂಮಿತಾಯಿಗೆ ಹೋಲಿಸುತ್ತಾ ಮತ್ತೊಂದೆಡೆ ಅವಮಾನ, ಶೋಷಣೆ ಮಾಡಲಾಗುತ್ತಿದೆ. ಸಾವಿತ್ರಿ ಬಾಯಿಫುಲೆ ಅವರಂತಹ ಶಿಕ್ಷಕಿ ಮಹಿಳೆಯರಿಗೆ ಶಿಕ್ಷಣ ಕೊಡಲು ಮುಂದಾಗದೇ ಇದ್ದಿದ್ದರೆ ಇಂದಿಗೂ ಮಹಿಳೆಯರ ಸ್ಥಿತಿ ಹೀನಾಯ ಸ್ಥಿತಿಯಲ್ಲಿ ಇರುತ್ತಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ವಿಶ್ವಜ್ಞಾನಿ ಸಂವಿಧಾನವನ್ನು ಬರೆಯದಿದ್ದರೆ ಮಹಿಳೆಯರ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೋಮಲ ಸಂತೋಷ್, ಆಶಾ ಜಿನಚಂದು, ಶೈಲಾ ಪ್ರಸಾದ್ ಜೈನ್, ಸಹನಾ ಸತ್ಯಾನಂದ್, ಗೀತಾಂಜಲಿ ವಿಫಲ ಜೈನ್. ಶೃತಿ ಯೋಗಾನಂದ್. ವಿಜಯ ವಸಂತರಾಜ್ ಜೈನ್. ಶ್ರೀದೇವಿ ಅಭಿನಂದನ್ ಜೈನ್. ಮೀನಾ ನಾಗೇಂದ್ರ. ಲಕ್ಷ್ಮಮ್ಮ ನರಸಿಂಹಯ್ಯ. ಅಂಜಲಿ ಭಾನುಪ್ರಕಾಶ್. ಪೂರ್ಣಿಮಾ ಮಹಾವೀರಬಾಬು. ಸ್ವಪ್ನ ವಿನೋದ್ ಪಾಲ್ಗೊಂಡಿದ್ದರು.