ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸರ್ಕಾರವು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ದಕ್ಷಿಣ ಭಾರತದ ರಾಜ್ಯಗಳ ಆದಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಸಿದು, ಉತ್ತರದ ರಾಜ್ಯಗಳಿಗೆ ಹಂಚುವ ತನ್ನ ತಾರತಮ್ಯದ ನೀತಿಯನ್ನು ಈ ಬಾರಿಯ ಬಜೆಟ್ ನಲ್ಲೂ ಮುಂದುವರೆಸಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಟೀಕಿಸಿದ್ದಾರೆ.ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ ಹಕ್ಕಿನ ಜಿಎಸ್‌ಟಿ ಹಣ ಮತ್ತು ಇನ್ನಿತರೆ ಆದಾಯದ ನ್ಯಾಯಯುತ ಪಾಲು, ಈ ಬಾರಿಯ ಬಜೆಟ್ ನಲ್ಲೂ ಹೊಸ ಘೋಷಣೆಗಳ ಮೂಲಕ ನಮಗೆ ದಕ್ಕಿಲ್ಲ. ಮೇಕೆದಾಟು, ಮಹದಾಯಿಗೆ ನ್ಯಾಯ ಸಿಕ್ಕಿಲ್ಲ. ರಾಜ್ಯಕ್ಕೆ ಹೊಸ ಐಐಟಿ, ಐಐಎಂಎಸ್ ಕ್ಯಾಂಪಸ್ ಮಂಜೂರಾತಿಯೂ ಆಗಿಲ್ಲ. ನಮ್ಮ ರಾಜ್ಯವು ದೇಶದ ಜಿಎಸ್ ಟಿಗೆ ಅತ್ಯಧಿಕ ಪಾಲು ನೀಡುತ್ತಾ ಬಂದಿದೆ. ಆದರೆ, ನಮಗೆ ಈ ಬಾರಿಯ ಬಜೆಟ್ ನಲ್ಲಿ ಎನ್.ಡಿ.ಎ ಸರ್ಕಾರ ಯಾವುದೇ ವಿಶೇಷ ಯೋಜನೆ ಪ್ರಕಟಿಸದೇ ಮಲತಾಯಿ ಧೋರಣೆ ತೋರ್ಪಡಿಸಿದೆ ಎಂದು ಕಿಡಿಕಾರಿದ್ದಾರೆ.
ಆಂಧ್ರಪ್ರದೇಶ ಹೊರತುಪಡಿಸಿ, ಉಳಿದೆಲ್ಲಾ ದಕ್ಷಿಣದ ರಾಜ್ಯಗಳನ್ನೂ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಮೋದಿ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಹಾರದ ಜೆಡಿಯು ಮತ್ತು ಆಂಧ್ರದ ಟಿಡಿಪಿ ನಾಯಕರನ್ನು ಓಲೈಸಲು, ಈ ಎರಡು ರಾಜ್ಯಗಳಿಗೆ ಹೊಸ ಯೋಜನೆಗಳ ಮಹಾಪೂರವನ್ನೇ ಹರಿಸಿರುವ ಈ ಬಜೆಟ್, ಬಿಜೆಪಿ ಆಡಳಿತವಿರುವ ರಾಜ್ಯಗಳನ್ನೂ ಕಡೆಗಣಿಸಿರುವುದು ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದಾರೆ.ಈ ಬಾರಿಯ ಬಜೆಟ್ ನಲ್ಲಿ ಕೃಷಿ ಮತ್ತು ಶಿಕ್ಷಣವನ್ನು ಬಹಳವಾಗಿ ನಿರ್ಲಕ್ಷಿಸಲಾಗಿದೆ. ಕಳೆದ ಬಾರಿ ಕೃಷಿಗೆ ಶೇ.3.20 ರಷ್ಟು ಮಾತ್ರ ಒತ್ತು ನೀಡಲಾಗಿತ್ತು, ಈ ಬಾರಿ ಇದು ಶೇ.3.15ಕ್ಕೆ ಇಳಿದಿರುವುದು ದುರಂತ. ದೇಶದ ರೈತರ ಹಿತ ಮತ್ತು ಜನತೆಯ ಆಹಾರ ಭದ್ರತೆ ಕುರಿತು ಎನ್.ಡಿ.ಎ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ದೂರಿದ್ದಾರೆ.
ದೊಡ್ಡ ಉದ್ಯಮಿಗಳಿಗೆ ನೆರವಾಗುವ ಮತ್ತು ಸಣ್ಣ ಉದ್ದಿಮೆದಾರರು ಮತ್ತು ಸಾಮಾನ್ಯರಿಗೆ ಯಾವ ಅನುಕೂಲವೂ ಇಲ್ಲದ ಈ ಬಜೆಟ್ ನಲ್ಲಿ ಒಂದೇ ಒಂದು ಪ್ರಶಂಸಾರ್ಹ ಅಂಶವೆಂದರೆ ಅದು- ಚುನಾವಣೆಗೂ ಮುನ್ನಾ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಯುವಕರಿಗೆ ಉದ್ಯೋಗ ನೀಡುವ ಯುವ ನ್ಯಾಯ ಯೋಜನೆಯ ವಿವರಗಳನ್ನು ಕದ್ದು ಬಜೆಟ್ ನಲ್ಲಿ ಅಳವಡಿಸಿಕೊಂಡಿರುವುದು. ಈ ಮೂಲಕವಾದರೂ ಯುವಕರಿಗೆ ಕೊನೆಗೂ ಉದ್ಯೋಗ ನೀಡಬೇಕೆಂಬ ಒತ್ತಡಕ್ಕೆ ಮೋದಿ ಸರ್ಕಾರ ಮಣಿದಿದೆ ಎಂದು ಅವರು ತಿಳಿಸಿದ್ದಾರೆ.ಸರ್ವರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ- ಶ್ರೀವತ್ಸಕನ್ನಡಪ್ರಭ ವಾರ್ತೆ ಮೈಸೂರುಸರ್ವರ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ದೇಶ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದ್ದಾರೆ.
ಎಲ್ಲ ವರ್ಗಗಳನ್ನೊಳಗೊಂಡ ಅಭಿವೃದ್ಧಿಗೆ ಹಣವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹವಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಸಂತಸದ ವಿಚಾರವಾಗಿದೆ. ಈ ಮೂಲಕ ದೇಶದ ಆರ್ಥಿಕತೆಗೆ ಪೂರಕವಾಗಿದ್ದು, ನರೇಂದ್ರಮೋದಿ ಅವರ ನೇತೃತ್ವದಲ್ಲಿ ದೇಶ ಸಮಗ್ರ ಅಭಿವೃದ್ಧಿಯಡೆಗೆ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ಉತ್ತಮವಾಗಿದೆ ಎಂದಿದ್ದಾರೆ.