ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕು ಸಮಸ್ಯೆ ಪರಿಹಾರ, ಅರಣ್ಯ ಭೂಮಿ ಒತ್ತುವರಿ ಸಕ್ರಮ, ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಅರಣ್ಯ ಮತ್ತು ಕಂದಾಯ ಭೂಮಿ ಹಕ್ಕಿಗೆ ಸಂಬಂಧಿಸಿದ ವಿಷಯಗಳನ್ನು ಶೀಘ್ರವೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಹಕ್ಕಿಗೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನು ಡಿರಿಸರ್ವ್ ಮಾಡುವ ಬಗ್ಗೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಐಎ ಸಲ್ಲಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಫೆ.22ರಂದು ದಾಖಲೆಗಳೊಂದಿಗೆ ಅಫಿಡೆವಿಟ್ ಅನ್ನು ವಕೀಲರಿಗೆ ತಲುಪಿಸಿದ್ದು, ಈ ಕುರಿತು ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ, ಸಂತ್ರಸ್ತರ ಪುನರ್ವಸತಿ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಮಲೆನಾಡು ರೈತರ ಹೋರಾಟ ಸಮಿತಿ ಸದಸ್ಯರಾದ ಶ್ರೀಕರ್ ಮತ್ತು ಇತರರು ಮಾತನಾಡಿ, ಶರಾವತಿ ಸಂತ್ರಸ್ತರ ಪುನರ್ವಸತಿ ಕುರಿತು ಸರ್ಕಾರದ ಮಟ್ಟದಲ್ಲಿ ಒಂದು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ, ಸಮಗ್ರವಾಗಿ ಪರಿಶೀಲನೆ ನಡೆಸಿ, ಪ್ರಸ್ತುತ ಇರುವ ಮಾರ್ಗಸೂಚಿಯನ್ನು ಪರಿಷ್ಕರಿಸಬೇಕೆಂದು ಮನವಿ ಮಾಡಿದರು.ಮನವಿಗೆ ಉತ್ತರಿಸಿದ ಸಚಿವರು, 1978ರ ಏಪ್ರಿಲ್ ೨೭ರ ಪೂರ್ವದ 3 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿ ಸಕ್ರಮಗೊಳಿಸಿ, ಪಟ್ಟಾ ವಿತರಿಸುವ ಕುರಿತು ಜಿಲ್ಲೆಯಲ್ಲಿ 1419 ಕುಟುಂಬಳಿಗೆ 2060 ಎಕರೆ ಅರಣ್ಯ ಒತ್ತುವರಿ ಪ್ರದೇಶವನ್ನು ಸಕ್ರಮಗೊಳಿಸಲು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ಈ ಪ್ರದೇಶವು ವಿವಿಧ ಅರಣ್ಯಗಳಲ್ಲಿದ್ದು, ಪ್ರತಿ ಅರಣ್ಯಕ್ಕೆ ಸಂಬಂಧಿಸಿದಂತೆ 65 ಡಿರಿಸರ್ವೇಷನ್ ಪ್ರಸ್ತಾವನೆ ಸಲ್ಲಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒತ್ತುವರಿ ಸಕ್ರಮಾತಿ ಆದೇಶಗಳಲ್ಲಿನ ಷರತ್ತುಗಳಂತೆ ಸಿದ್ಧಪಡಿಸಬೇಕಿದೆ. ಈ ಷರತ್ತುಗಳಂತೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಕ್ಷೇತ್ರದಲ್ಲಿ ಹಲವಾರು ಅಡಚಣೆಗಳಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆ 2006 ಹಾಗೂ ನಿಯಮ 2008 ರಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 97075 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 2444 ಅರ್ಜಿದಾರರಿಗೆ ಹಕ್ಕುಪತ್ರ ವಿತರಿಸಿದ್ದು, 2893 ಅರ್ಜಿ ವಿಲೇಗೆ ಬಾಕಿ ಇವೆ. ಉಳಿದವರ ಅರ್ಜಿಗಳು ವಿವಿಧ ಕಾರಣಗಳಿಗೆ ತಿರಸ್ಕೃತಗೊಂಡಿವೆ. ಸರ್ಕಾರದ ನಾಮನಿರ್ದೇಶಿತ ಸದಸ್ಯರು ಇಲ್ಲದೇ ಇರುವ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ನಿಯಮಬಾಹಿರವಾಗಿ ವಜಾ ಆಗಿರುವ ಅರ್ಜಿಗಳ ಬಗ್ಗೆ ಸಲಹೆಗಳನ್ನು ಸ್ವೀಕರಿಸಿ, ಪರಿಶೀಲಿಸಲಾಗುವುದು ಎಂದರು.ಹೊಸನಗರ ಹಾಗೂ ಇತರೆ ತಾಲೂಕುಗಳ ಕಂದಾಯ ಗ್ರಾಮಗಳಲ್ಲಿ ಯಾವುದೇ ಅಧಿಸೂಚನೆಯಾಗದೇ ‘ಸೂಚಿತ ಅರಣ್ಯವೆಂದು’ ಕಂದಾಯ ಇಲಾಖೆಗಳಲ್ಲಿ ದಾಖಲಿಸಿರುವುದನ್ನು ಕೈ ಬಿಡಬೇಕೆಂಬ ಬೇಡಿಕೆ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಕೇಳಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಸೊಪ್ಪಿನಬೆಟ್ಟ ಹಾಗೂ ಕಾನು ಜಮೀನುಗಳ ಅನಧಿಕೃತ ಸಾಗುವಳಿ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡುವ ಬಗ್ಗೆ ನಮೂನೆ 53ರಲ್ಲಿ 1,46,601 ಅರ್ಜಿಗಳು ಬಂದಿದ್ದು 18,805ಕ್ಕೆ ಮಂಜೂರಾತಿ ದೊರೆತಿದೆ. 127480 ತಿರಸ್ಕೃತಗೊಂಡಿವೆ. ನಮೂನೆ 50ರಲ್ಲಿ 1,09,940 ಅರ್ಜಿಗಳು ಬಂದಿದ್ದು, 21,654 ಅರ್ಜಿಗಳು ಮಂಜೂರಾಗಿವೆ. 89,079 ತಿರಸ್ಕೃತಗೊಂಡಿವೆ. ಇದಕ್ಕೆ ಸಂಬಂಧಿಸಿದ ಸರ್ಕಾರದ ಸುತ್ತೋಲೆ ಕುರಿತು ಪುನರ್ ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಇತರೆ ತಾಲೂಕುಗಳ ವ್ಯಾಪ್ತಿಯಲ್ಲಿ ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 1888 ರಲ್ಲಿ ಮಂಜೂರು ಮಾಡಲಾದ ಮನೆಗಳಿಗೆ ಹಂಗಾಮಿ ಮನೆಗಳೆಂದು ಇರುವ ಕಾರಣ ಅವರಿಗೆ ಬ್ಯಾಂಕ್ ಸಾಲ, ಪೋಡಿ ಇತರೆ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಹಂಗಾಮಿ ಮನೆದಳ ಪತ್ರವನ್ನು ಖಾಯಂ ಗೊಳಿಸುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಗ್ರಾಮ ಠಾಣಾಗಳಲ್ಲಿರುವ ಮನೆಗಳಿಗೆ ಹಾಗೂ ಸರ್ಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ ಮತ್ತು ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಇ-ಸ್ವತ್ತು ದಾಖಲೆ ಒದಗಿಸುವುದು ಸಮಸ್ಯೆಯಾಗುತ್ತಿದೆ. ಸರ್ವೇಯರ್‌ಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರಣವಾಗಿದೆ. ಸಕಾಲದಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಸಿಇಒ ಪರಿಶೀಲಿಸಿ ಕ್ರಮ ವಹಿಸಬೇಕು. ಹೆದ್ದಾರಿ, ರಾಜ್ಯ ಹೆದ್ದಾರಿ, ಮುಖ್ಯ ರಸ್ತೆಗಳಲ್ಲಿರುವ ಮನೆಗಳಿಗೆ ಇ-ಸ್ವತ್ತು ವಿತರಣೆಗೆ ಸಮಸ್ಯೆ ಕುರಿತು ಡಿಸಿ, ಸಿಇಒ ಹಾಗೂ ಸಮಿತಿ ಸದಸ್ಯರು ಚರ್ಚಿಸಿ ಸಲಹೆ ನೀಡುವಂತೆ ತಿಳಿಸಿದರು.ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಸರ್ಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ ನಿಮಯದಡಿ ಮಂಜೂರು ಮಾಡಲಾದ ಹಾಗೂ ರೈತರ ಸಾಗುವಳಿ ಮತ್ತು ಸ್ವಾಧೀನ ಅನುಭವದಲ್ಲಿರುವ ಭೂಮಿಯನ್ನು ಅರಣ್ಯ ಭೂಮಿ ಎಂದು ಇಂಡೀಕರಣ ಮಾಡುವುದನ್ನು ಕೈ ಬಿಡಬೇಕೆಂದು ರೈತರು ಮನವಿ ಮಾಡಿದ್ದು, ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನೀಡುವಂತೆ ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ವಿದ್ಯುತ್, ನೀರಾವರಿ ಇನ್ನಿತರೆ ಯೋಜನೆ ಮುಳುಗಡೆ ಸಂತ್ರಸ್ತ ಭೂ ಹಕ್ಕಿಗೆ ಸಂಬಂಧಿಸಿದಂತೆ, ಸ್ವಾಧೀನಪಡಿಸಿಕೊಂಡೂ ಅನುಪಯುಕ್ತವಾದ ಭೂಮಿ ಸಾಕಷ್ಟು ಕಡೆಗಳಲ್ಲಿದ್ದು, ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಮಿತಿ ಮತ್ತು ಆಡಳಿತಾಧಿಕಾರಿಗಳಿಂದ ಸಲಹೆ ಪಡೆದು ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಮಲೆನಾಡು ರೈತರ ಹೋರಾಟ ಸಮಿತಿ ಪದಾಧಿಕಾರಿಗಳಾದ ತೀ.ನ.ಶ್ರೀನಿವಾಸ, ಶ್ರೀಕರ್, ರಮೇಶ್ ಹೆಗಡೆ ಇತರರು ಪಾಲ್ಗೊಂಡಿದ್ದರು.
- - - -ಫೋಟೋ:ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಹಕ್ಕಿಗೆ ಸಂಬಂಧಿಸಿದ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.