ಕಸ್ತೂರಿರಂಗನ್ ವರದಿ ಜಾರಿಯಾದರೆ ಗಣಿಗಾರಿಕೆ, ಕಲ್ಲು ಮತ್ತು ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಹಾಗೂ ದೊಡ್ಡ ಕಟ್ಟಡಗಳು ಮತ್ತು ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ನಿರ್ಬಂಧಗಳು ಎದುರಾಗಲಿವೆ.

ಕಾರವಾರ: ಕಸ್ತೂರಿರಂಗನ್ ವರದಿಯ 7ನೇ ಕರಡು ಅಧಿಸೂಚನೆ ಕುರಿತು ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಿ, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜು. 27ರಂದು ಹೊರಡಿಸಿರುವ 7ನೇ ಕರಡು ಅಧಿಸೂಚನೆಯಡಿ ಕರ್ನಾಟಕದ 10 ಜಿಲ್ಲೆಗಳ 39 ತಾಲೂಕುಗಳ 1,449 ಗ್ರಾಮಗಳು ಹಾಗೂ 20,668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಗುರುತಿಸಲಾಗಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 556 ಗ್ರಾಮಗಳು ಒಳಗೊಂಡಿವೆ ಎಂದರು.ಕಸ್ತೂರಿರಂಗನ್ ವರದಿ ಜಾರಿಯಾದರೆ ಗಣಿಗಾರಿಕೆ, ಕಲ್ಲು ಮತ್ತು ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಹಾಗೂ ದೊಡ್ಡ ಕಟ್ಟಡಗಳು ಮತ್ತು ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ನಿರ್ಬಂಧಗಳು ಎದುರಾಗಲಿವೆ. ಇದರಿಂದ ಕೃಷಿ, ತೋಟಗಾರಿಕೆ ಸೇರಿದಂತೆ ಸ್ಥಳೀಯರ ಜೀವನೋಪಾಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 40 ಲಕ್ಷ ಜನರ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಿದರು.ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಹಲವು ರಾಷ್ಟ್ರೀಯ ಯೋಜನೆಗಳಿಗಾಗಿ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕಳೆದುಕೊಂಡಿದೆ. ಉಳಿದಿರುವ ಭೂಮಿಯನ್ನೂ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದರೆ ಸ್ಥಳೀಯರು ಬದುಕುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಶಾಂತಾರಾಮ ನಾಯಕ ಹೇಳಿದರು.

ಪ್ರತಿಯೊಂದು ಗ್ರಾಮದಲ್ಲೂ ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಬಳಿಕ ವೈಜ್ಞಾನಿಕ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವಾಸ್ತವಾಂಶಗಳನ್ನೊಳಗೊಂಡ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.ರಾಜಕೀಯ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಪರಿಸರ ಸಂರಕ್ಷಣೆಯ ಜತೆಗೆ ಮಾನವ ವಾಸ, ಕೃಷಿ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಶ್ಯಾಮನಾಥ ನಾಯ್ಕ, ಎಂ.ಎ. ಖತೀಬ್, ಯಮುನಾ ಗಾಂವಕರ, ಗೌರೀಶ ನಾಯಕ, ಸಂತೋಷ ನಾಯ್ಕ ಬಾಳೆಗುಳಿ ಹಾಗೂ ಸಂತೋಷ ನಾಯ್ಕ ಜರಡಿ ಉಪಸ್ಥಿತರಿದ್ದರು.