ಸಾರಾಂಶ
ಶಕ್ತಿ ಯೋಜನೆಯಿಂದಾಗಿ ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುವುದರಿಂದ ಆಟೋಗಳಿಗೆ ಬಾಡಿಗೆ ಇಲ್ಲದೆ ನಷ್ಟ ಅನುಭವಿಸುವಂತೆ ಆಗಿದೆ.
ಹುಬ್ಬಳ್ಳಿ:
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಆಟೋ ಚಾಲಕರ ಸಮಸ್ಯೆಗಳ ಕುರಿತು ಚರ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ಧಾರವಾಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿವಿಧಾನ ಸೌಧದ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ರಾಜ್ಯ ಸರ್ಕಾರ, ಸಚಿವರು ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಶಕ್ತಿ ಯೋಜನೆ ಕೈಬಿಡಬೇಕು, ಓಲಾ, ಊಬರ್ ಆ್ಯಪ್‌ಗಳಿಗೆ ಅವಕಾಶ ನೀಡಬಾರದು, ಪ್ರತ್ಯೇಕ ಆಟೋನಗರ ನಿರ್ಮಿಸಬೇಕು. ಸರ್ಕಾರ ಆಟೋ ಚಾಲಕರ, ಮಾಲೀಕರನ್ನು ನಿರ್ಲಕ್ಷಿಸುತ್ತಿದೆ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಕ್ತಿ ಯೋಜನೆಯಿಂದಾಗಿ ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುವುದರಿಂದ ಆಟೋಗಳಿಗೆ ಬಾಡಿಗೆ ಇಲ್ಲದೆ ನಷ್ಟ ಅನುಭವಿಸುವಂತೆ ಆಗಿದೆ. ಆದ್ದರಿಂದ ತಕ್ಷಣ ಶಕ್ತಿ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಆಟೋ ಚಾಲಕರಿಗೂ ಕಟ್ಟಡ ಕಾರ್ಮಿಕರಿಗೆ ದೊರೆಯವ ಸೌಲಭ್ಯ ಸಿಗುವಂತಾಗಬೇಕು. ಸ್ಮಾರ್ಟ್‌ಸಿಟಿ ಯೋಜನೆಯಡಿ ಆಟೋ ನಿಲ್ದಾಣ ಸ್ಥಾಪಿಸಬೇಕು, ಜನದಟ್ಟಣೆ ಹಾಗೂ ವ್ಯಾಪಾರ ಮಳಿಗೆಗಳು ಇರುವ ಸ್ಥಳಗಳಲ್ಲಿ ಬೆಂಗಳೂರು ಮಾದರಿಯಂತೆ ಆಟೋಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ಬಾಬಾಜಾನ್ ಮುಧೋಳ, ಬಷೀರ್ ಮುಧೋಳ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಹನಮಂತಪ್ಪ ಪವಾಡಿ, ಪ್ರಕಾಶ ಉಳ್ಳಾಗಡ್ಡಿ, ಫಯಾಜ್‌ಅಹ್ಮದ್ ಜಮೀನ್ದಾರ್, ರಮೇಶ ಭೋಸಲೆ ಇದ್ದರು.