ಪರಿಶಿಷ್ಟ ಕಾಲೋನಿಗಳಲ್ಲಿ ಬಿಟ್ ವ್ಯವಸ್ಥೆ ಬಲಗೊಳಿಸಬೇಕು. ಗ್ರಾಮಗಳ ದೇವಲಾಯ ಹಾಗೂ ಹೊಟೇಲ್ ಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ಇಲ್ಲದೆ ಅಸ್ಪೃಶ್ಯತೆ ಆಚರಣೆ ಕಂಡು ಬಂದಿದೆ. ಈ ಬಗ್ಗೆ ನಿಗಾ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ ದೊಡ್ಡಿ

ದಲಿತ ಕಾಲೋನಿಗಳಲ್ಲಿ ಜನರ ಕುಂದುಕೊರತೆ ಆಲಿಸಲು ಪ್ರತಿ ಗ್ರಾಮಗಳಿಗೆ ಆಗಮಿಸಿ ಸಮುದಾಯದೊಂದಿಗೆ ಮುಕ್ತವಾಗಿ ಚರ್ಚಿಸಿ ದೂರುಗಳನ್ನು ಪಡೆದು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದ ದಲಿತ ಜನರ ಕುಂದುಕೊರತೆ ಸಭೆಯಲ್ಲಿ ದೂರು ಅಲಿಸಿ ಮಾತನಾಡಿ, ಪೊಲೀಸ್ ಇಲಾಖೆ ದಲಿತರ ಹಿತ ಕಾಯಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಶ್ರಮಿಸುತ್ತಿದೆ ಎಂದರು.

ರಾಜ್ಯ ಗೃಹ ಇಲಾಖೆ ಆದೇಶದಂತೆ ದಲಿತ ಸಮುದಾಯ ಸಮಸ್ಯೆಗಳ ಆಲಿಸುವ ನಿಟ್ಟಿನಲ್ಲಿ ಠಾಣೆಯ ಆಯಾ ಗ್ರಾಮಗಳ ಬಿಟ್ ಪೊಲೀಸರು ಹಾಗೂ ಮಹಿಳಾ ಸಿಬ್ಬಂದಿ ಜೊತೆಗೂಡಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜನರೊಂದಿಗೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್ ಮಾತನಾಡಿ, ಪರಿಶಿಷ್ಟ ಕಾಲೋನಿಗಳಲ್ಲಿ ಬಿಟ್ ವ್ಯವಸ್ಥೆ ಬಲಗೊಳಿಸಬೇಕು. ಗ್ರಾಮಗಳ ದೇವಲಾಯ ಹಾಗೂ ಹೊಟೇಲ್ ಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ಇಲ್ಲದೆ ಅಸ್ಪೃಶ್ಯತೆ ಆಚರಣೆ ಕಂಡು ಬಂದಿದೆ. ಈ ಬಗ್ಗೆ ನಿಗಾ ವಹಿಸಬೇಕು. ದಲಿತ ಕೇರಿಗಳಲ್ಲಿ ಅನಧಿಕೃತ ಮದ್ಯಪಾನ, ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆ ಸಹಕಾರದೊಂದಿಗೆ ದಾಳಿ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ನಂತರ ಪ್ರತಿಕ್ರಿಯಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್, ದಲಿತ ಮುಖಂಡರ ಅಹವಾಲು ಸ್ವೀಕರಿಸಿ ಕಾನೂನು ಚೌಕಟ್ಟಿನಲ್ಲಿ ದೂರಗಳ ಬಗ್ಗೆ ಕ್ರಮವಹಿಸಲಾಗುವುದು ಎಂದರು.

ನಂತರ ಪೊಲೀಸ್ ಇಲಾಖೆ ಇಆರ್ ಎಸ್‌ಎಸ್ ವಾಹನಗಳ ಬಗ್ಗೆ ಹಾಗೂ ಸಂಚಾರ ನಿಯಮಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಾಗೂ ಅಪರಾಧ ತಡೆಗಟ್ಟಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ವಿವರಿಸಿದರು.

ಈ ವೇಳೆ ದಲಿತ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕಾಡುಕೊತ್ತನಹಳ್ಳಿ ಚಿದಂಬರ ಮೂರ್ತಿ, ಚಿಕ್ಕರಸಿನಕೆರೆ ಮೂರ್ತಿ, ಟಿ.ಬಿ.ಹಳ್ಳಿ ಸಂತೋಷ್, ಗುಡಿಗೆರೆ ಪ್ರಸಾದ್, ಬಸವರಾಜು, ಸತೀಶ್, ಪೂಜಾರಿ ಸಿದ್ದರಾಜು, ಗ್ರಾಪಂ ಸದಸ್ಯರಾದ ಮಾದರಹಳ್ಳಿ ದೇವಿರಮ್ಮ, ಪ್ರಸಾದ್ ಸೇರಿದಂತೆ ಪೊಲೀಸ್ ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು.