ಸದನದಲ್ಲಿ ನೌಕರರ ಸಮಸ್ಯೆ ಬಗ್ಗೆ ಚರ್ಚಿಸುವೆ: ಶಾಸಕ ಕೃಷ್ಣನಾಯ್ಕ

| Published : Jul 12 2024, 01:36 AM IST

ಸದನದಲ್ಲಿ ನೌಕರರ ಸಮಸ್ಯೆ ಬಗ್ಗೆ ಚರ್ಚಿಸುವೆ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಎಲ್ಲ ಕಡೆಗೂ ಸರ್ಕಾರಿ ನೌಕರರು ಈ ಕುರಿತು ಮನವಿ ಸಲ್ಲಿಸಿದ್ದಾರೆ.

ಹೂವಿನಹಡಗಲಿ: ಸದನದಲ್ಲಿ ನೌಕರರ ಸಮಸ್ಯೆ ಬಗ್ಗೆ ಚರ್ಚಿಸುವೆ ಎಂದು ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ 2ನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಶಾಸಕರು, ರಾಜ್ಯದ ಎಲ್ಲ ಕಡೆಗೂ ಸರ್ಕಾರಿ ನೌಕರರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಕಳೆದ 5 ವರ್ಷಗಳಿಂದ ಈ 7ನೇ ವೇತನ ಆಯೋಗ ಜಾರಿ ಮಾಡುತ್ತಿಲ್ಲ. ಈ ಕುರಿತು ಜಾರಿಗೆ ಅಡ್ಡಿಯಾದ ತೊಡಕು ಹಾಗೂ ಸಾಧಕ-ಬಾಧಕಗಳನ್ನು ಚರ್ಚಿಸಿ, ಸದನದಲ್ಲಿ ಚರ್ಚಿಸುತ್ತೇನೆ. ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆಂದು ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ 2ನೇ ಮಹಡಿ ನಿರ್ಮಾಣಕ್ಕೆ ಅನುದಾನ ತರಲು, ಸರ್ಕಾರದ ಗ್ಯಾರಂಟಿ ಯೋಜನೆಗಳು ಅಡ್ಡಿಯಾಗಿವೆ. ಇದರಿಂದ ಅನುದಾನ ಕೊರತೆ ಇದೆ. ಆದರೂ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ತರುವ ಪ್ರಯತ್ನ ಮಾಡುವೆ. ಜತೆಗೆ ವೈಯಕ್ತಿಕ ಅನುದಾನ ನೀಡುವ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೀಸಲಿರುವ ಅನುದಾನದಲ್ಲಿಯೂ ನಮ್ಮ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹5 ಸಾವಿರ ಕೋಟಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ನಮ್ಮ ಕ್ಷೇತ್ರಕ್ಕೆ ₹90 ಕೋಟಿ ಅನುದಾನ ನೀಡಬೇಕಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಸರ್ಕಾರ ಜಾರಿ ಮಾಡಿರುವ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭಕ್ಕೆ, ಶಾಸಕರ ಅನುದಾನ ನೀಡಬೇಕಿದೆ. ಜತೆಗೆ ಅದಕ್ಕೆ ಪ್ರತ್ಯೇಕ ಅನುದಾನ ನಿಗದಿ ಮಾಡಿಲ್ಲ. ಅದನ್ನು ನಿರ್ಲಕ್ಷ್ಯ ಮಾಡಿದರೆ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯವಾಗಲಿದೆ. ಏನೇ ತೊಂದರೆ ಬಂದರೂ ಎಲ್ಲವನ್ನು ಸರಿಪಡಿಸುವಂತ ಪ್ರಯತ್ನ ಮಾಡುತ್ತಿದ್ದೇನೆಂದು ಹೇಳಿದರು.

ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ, ಮಾಗಳ-ಕಲ್ಲಾಗನೂರು ನಡುವೆ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಈಗಾಗಲೇ ಡಿಪಿಆರ್‌ ರಚನೆಗೆ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲೇ ಈ ಕಾರ್ಯ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸುವ ಪ್ರಯತ್ನ ಮಾಡುತ್ತೇನೆ. ಶಿಕ್ಷಕರ ಗುರು ಭವನ ನಿರ್ಮಾಣವನ್ನು ಉತ್ತಮ ಶೈಲಿಯಲ್ಲಿ ನಿರ್ಮಾಣ ಮಾಡಬೇಕಿದೆ. ಅದಕ್ಕೆ ಅಗತ್ಯವಿರುವ ಅನುದಾನ ತರುವಂತಹ ಕೆಲಸ ಮಾಡೋಣ ಎಂದರು.

ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಬೇಕಿದೆ. ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಅನಾರೋಗ್ಯಕ್ಕೆ ಈಡಾದ ಸಂದರ್ಭದಲ್ಲಿ ಈ ಯೋಜನೆ ಸಹಾಯಕ್ಕೆ ಬರುತ್ತವೆ. ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಹಾಗೆ ಅನುಷ್ಠಾನ ಮಾಡಬೇಕೆಂದು ಹೇಳಿದರು.

ತಾಪಂ ಇಒ ಉಮೇಶ ಮಾತನಾಡಿ, ಸರ್ಕಾರ ಎನ್‌ಪಿಎಸ್‌ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕಿದೆ. ನೌಕರರ ನಿವೃತ್ತಿ ಹೊಂದಿದ ಬಳಿಕ ಆ ವ್ಯಕ್ತಿ ತಿಂಗಳಿಗೆ ₹1 ಸಾವಿರ ಮಾತ್ರ ನಿವೃತ್ತಿ ವೇತನ ಬರುತ್ತದೆ. ಇದರಿಂದ ಅವರು ಜೀವನ ಸಾಗಿಸಲು ಹೇಗೆ ಸಾಧ್ಯ ಎಂದ ಅವರು, ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲಿ ಎನ್‌ಪಿಎಸ್‌ ಯೋಜನೆ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಕೊಟ್ರಗೌಡ, ಅಧ್ಯಕ್ಷ ಎಂ.ಪಿ.ಎಂ.ಅಶೋಕ ಮಾತನಾಡಿದರು.