ಚರ್ಚಾ, ಹರಟೆ ಕಾರ್ಯಕ್ರಮಗಳು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿ: ಮಲ್ಲಿಕಾರ್ಜುನ್

| Published : Sep 08 2025, 01:00 AM IST

ಚರ್ಚಾ, ಹರಟೆ ಕಾರ್ಯಕ್ರಮಗಳು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿ: ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ವಿಷಯದ ಮಂಡನೆ ಮತ್ತು ವಿರೋಧದ ವಾದಗಳನ್ನು ಎದುರಿಸುವಾಗ ವ್ಯಕ್ತಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಯುತ್ತದೆ. ಇಂತಹ ಕಾರ್ಯಕ್ರಮವನ್ನು ಕಳೆದ 3 ವರ್ಷಗಳಿಂದ ಮಠವು ಹಮ್ಮಿಕೊಂಡು ಮಕ್ಕಳಲ್ಲಿ ಜ್ಞಾನ ವಿಕಾಸಕ್ಕೆ ಮುಂದಾಗಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಚರ್ಚಾ ಸ್ಪರ್ಧೆಗಳು, ಹರಟೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಾಯಕತ್ವದ ಗುಣ ಹಾಗೂ ಭಾಷಣ ಕಲೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ತಾಲೂಕಿನ ಹೇಮಗಿರಿ ಕ್ಷೇತ್ರದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಅತ್ತೆ ಮೇಲೋ, ಸೊಸೆ ಮೇಲೋ ಎಂಬ ಕೌಟುಂಬಿಕ ವಿಷಯ ಕುರಿತು ಹಮ್ಮಿಕೊಂಡಿದ್ದ ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ವಿಷಯದ ಮಂಡನೆ ಮತ್ತು ವಿರೋಧದ ವಾದಗಳನ್ನು ಎದುರಿಸುವಾಗ ವ್ಯಕ್ತಿಗಳಲ್ಲಿ ಸೃಜನಶೀಲ ಚಿಂತನೆ ಬೆಳೆಯುತ್ತದೆ. ಇಂತಹ ಕಾರ್ಯಕ್ರಮವನ್ನು ಕಳೆದ 3 ವರ್ಷಗಳಿಂದ ಮಠವು ಹಮ್ಮಿಕೊಂಡು ಮಕ್ಕಳಲ್ಲಿ ಜ್ಞಾನ ವಿಕಾಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ವಿಷಯಗಳನ್ನು ವಿಭಿನ್ನ ಕೋನಗಳಿಂದ ವಿಶ್ಲೇಷಿಸಿ ಬಲವಾದ ವಾದಗಳನ್ನು ರೂಪಿಸುವ ಸಾಮರ್ಥ್ಯವನ್ನು ಹರಟೆ, ಚರ್ಚಾ ಕೂಟಗಳು ಬೆಳೆಸುತ್ತವೆ. ಸ್ಪಷ್ಟವಾಗಿ ಮಾತನಾಡುವ ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಮತ್ತು ಕೇಳುವ ಕೌಶಲ್ಯ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಹೇಮಗಿರಿ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಠ್ಯಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಭಾಗವಹಿಸಲು ವೇದಿಕೆ ಸೃಷ್ಟಿಸಿಕೊಡುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಟೀವಿ ವಾಹಿನಿಯ ಹರಟೆ ಖ್ಯಾತಿಯ ಶಿವಮೊಗ್ಗ ಉಮೇಶ್‌ಗೌಡ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ಟಿಎಪಿಸಿಎಂಎಸ್ ಸಂಸ್ಥೆ ಮಾಜಿ ನಿರ್ದೇಶಕ ಉದಯಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ಬಂಡಿಹೊಳೆ ದರ್ಶನ್, ಸದಸ್ಯರಾದ ಚೆಲುವಮ್ಮ, ಜಯಮ್ಮ, ಅಗ್ರಹಾರಬಾಚಹಳ್ಳಿ ಆರ್.ಶ್ರೀನಿವಾಸ್, ನಾಟನಹಳ್ಳಿ ಜಗದೀಶ್ ಉಪಸ್ಥಿತರಿದ್ದರು.