ಸಾರಾಂಶ
ಅಕ್ರಮ ಪಡಿತರ ಸಾಗಣೆ-ಅಕ್ಕಿ ವಶ । ಗಾಂಜಾ ಮಾರಾಟಗಾರನ ಬಂಧನ
ಕನ್ನಡಪ್ರಭ ವಾರ್ತೆ ಹೊಸಪೇಟೆಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ಶಾಸಕರು ಹಾಗೂ ಸಂಸದರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಹಾಗೂ ಆಹಾರ ಇಲಾಖೆಗಳ ಅಧಿಕಾರಿಗಳು ಅಕ್ರಮ ಅಕ್ಕಿ ಸಾಗಾಟ, ಗಾಂಜಾ ಮತ್ತು ಅಕ್ರಮ ಮದ್ಯ ಮಾರಾಟಗಾರರ ಬೆನ್ನು ಬಿದ್ದಿದ್ದಾರೆ.
ನಗರದ ಚಿತ್ತವಾಡ್ಗಿ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಚಿತ್ತವಾಡ್ಗಿ ನಿವಾಸಿ ಜಿಲಾನ್ (45) ಎಂಬುವನನ್ನು ಬಂಧಿಸಿರುವ ಪೊಲೀಸರು, ಬಂಧಿತನಿಂದ ₹6500 ಮೌಲ್ಯದ 130 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಜತೆಗೆ ₹1.56 ಲಕ್ಷ ನಗದು ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಕ್ರಮ ಪಡಿತರ ಸಾಗಣೆ-ಆಹಾರಧಾನ್ಯ ವಶ:
ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದನ್ನು ಪತ್ತೆಮಾಡಿ 182.6 ಕ್ವಿಂಟಲ್ ಅಕ್ಕಿ ಮತ್ತು 10.50 ಕ್ವಿಂಟಲ್ ರಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.ಅವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಗಣೆ ಮಾಡುತ್ತಿದ್ದ ಒಂದು 1 ವಾಹನ ಸೇರಿ ಮೂರು ಗೋದಾಮುಗಳನ್ನು ಸೀಜ್ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ. ಸೀಜ್ ಮಾಡಿದ ಆಹಾರ ಧಾನ್ಯದ ಮೌಲ್ಯ ₹6,05,660 ಆಗಿದೆ ಎಂದೂ ತಿಳಿಸಿದ್ದಾರೆ.
ಕಮಲಾಪುರದಲ್ಲಿ ಅಕ್ಕಿ ವಶ:ತಾಲೂಕಿನ ಕಮಲಾಪುರದ ಕುಪ್ಪಯ್ಯ ಕ್ಯಾಂಪ್ ಬಳಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ₹1,92,660 ಮೌಲ್ಯದ 7410 ಕೆಜಿ ಅಕ್ಕಿ, ₹5 ಲಕ್ಷ ಬೆಲೆಬಾಳುವ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ. ಕೊಪ್ಪಳದ ಕುಷ್ಟಗಿಯ ಬಸವರಾಜ ಪೊಲೀಸ್ ಪಾಟೀಲ್ ಮತ್ತು ಹೊಸಪೇಟೆಯ ಗೌಸ್ ಮತ್ತು ಇತರರ ವಿರುದ್ಧ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ವಶ:ನಗರದ ಹೊರವಲಯದ ಸಂಕ್ಲಾಪುರ ತಾಂಡಾದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದ ಮಂಜುನಾಯ್ಕ ಎಂಬವರ ಮನೆ ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ₹43,985 ಮೌಲ್ಯದ 106 ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿ ಮಂಜುನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.