ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಕೇರಳದ ಕಾಸರಗೋಡಿನ ಎಡನೀರು ಮಠದ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ವಿತರರಿಸಿ ಅವರು ಮಾತನಾಡಿದರು. ಕೈಗಾರಿಕಾ ನೀತಿ 2020-25 ರಲ್ಲೂ ರಾಜ್ಯ ಸರ್ಕಾರದ ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ನಿಯಮವಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಈ ಬಗ್ಗೆ ಈಗಾಗಲೇ ಒಂದೆರೆಡು ಸಭೆಗಳನ್ನು ನಡೆಸಲಾಗಿದೆ. ಕನ್ನಡಿಗರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಮರಾಠಿಗರು ನಮ್ಮ ಜಲ, ಇಲ್ಲಿನ ಗಾಳಿ ಹಾಗೂ ಎಲ್ಲ ಸವಲತ್ತನ್ನು ಪಡೆದು ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಆದರೆ ಕೇರಳ ರಾಜ್ಯ ಗಡಿ ಭಾಗದಲ್ಲಿನ ವಾತಾವರಣ ವಿರುದ್ಧವಾಗಿದೆ ಎಂದು ಎಂಇಎಸ್ ವಿರುದ್ಧ ಸಚಿವರು ಕಿಡಿಕಾರಿದರು. ಸಚ್ಚಿದಾನಂದಶ್ರೀ ಕನ್ನಡ ಕೊಡುಗೆ: ಗಡಿಯಲ್ಲಿ ಮಾತ್ರವಲ್ಲ, ಗಡಿಯ ಹೊರಗಿನ ಜಿಲ್ಲೆಯಲ್ಲೂ ಕನ್ನಡ ಭಾಷೆ ಸುರಕ್ಷಿತವಾಗಿದೆ. ನನಗೆ ನಿಜಕ್ಕೂ ಕೇರಳದಲ್ಲಿ ಇದ್ದೇನೆ ಎನ್ನುವ ಭಾವನೆ ಮೂಡುತ್ತಿಲ್ಲ. ಗಡಿ ಹೊರಗೆ ನಮ್ಮ ಕನ್ನಡದ ಕಂಪು ಆ ಮಟ್ಟಕ್ಕೆ ಪಸರಿಸಿದೆ. ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಈ ಭಾಗದಲ್ಲಿ ಕನ್ನಡ ಶಾಲೆ ತೆರೆದು ಕನ್ನಡ ಅಭಿವೃದ್ಧಿಗೆ ತಮ್ಮದೇ ಆದ ರೀತಿಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಕನ್ನಡ ಶಾಲೆ ಅಭಿವೃದ್ಧಿಗೆ ಶ್ರಮ: ಕಾಸರಗೋಡು ಜಿಲ್ಲೆಯಲ್ಲಿ 202 ಕನ್ನಡ ಮಾಧ್ಯಮದ ಶಾಲೆಗಳಿರುವುದು ಸಂತಸದ ವಿಚಾರ. ಗಡಿ ಭಾಗದ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರು ಇಂದು ನಮ್ಮೊಂದಿಗಿಲ್ಲ. ಅವರ ನೆನಪಿಗಾಗಿ ಕನ್ನಡ ಭವನ ಕಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಈ ಭಾಗದಲ್ಲಿ ಶಾಲಾ ಕೊಠಡಿ, ಕನ್ನಡ ಭವನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಂದೆಯೂ ಇಲಾಖೆ ವತಿಯಿಂದ ಇಲ್ಲಿನ ಕನ್ನಡ ಶಾಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.
ಕೇರಳ ಸರ್ಕಾರ ನಮಗೆ ಕನ್ನಡ ಭವನ ಕಟ್ಟಲು ಸ್ಥಳ ನೀಡಿ ಕನ್ನಡ ಭಾಷಿಕರಿಗೆ ಸಹಕಾರ ನೀಡುತ್ತಿದೆ. ಆದರೆ ಗೋವಾದಲ್ಲಿ ನಾವೇ ಹಣ ಕೊಡುತ್ತೇವೆ ಎಂದರೂ ಅಲ್ಲಿನ ಸರ್ಕಾರ ಕನ್ನಡ ಭವನ ನಿರ್ಮಾಣಕ್ಕೆ ಸ್ಥಳ ನೀಡುತ್ತಿಲ್ಲ ಎಂದು ಸಚಿವರು ದೂರಿದರು. ಕನ್ನಡಿಗರ ಬಗ್ಗೆ ವಿಶೇಷ ಕಾಳಜಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಭಾಷೆ ಹಾಗೂ ಕನ್ನಡದ ಮಹನೀಯರ ವಿಚಾರದಲ್ಲಿ ವಿಶೇಷ ಕಾಳಜಿ ಹೊಂದಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಪುಣ್ಯತ್ಮರು ಯಾವುದೇ ಪ್ರಶಸ್ತಿ ಕೊಡದೇ ಹಾಗೇ ಬಾಕಿ ಬಿಟ್ಟು ಹೋಗಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಅದಕ್ಕೆ ಮುಖ್ಯಮಂತ್ರಿಗಳು ಮೂರು ಕೋಟಿಯಲ್ಲ, ಹತ್ತು ಕೋಟಿ ಆದರೂ ಸರಿ ಪ್ರಶಸ್ತಿ ವಿತರಣೆ ಮಾಡಿ. ಈ ಮೂಲಕ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಬೇಕು ಎಂದಿದ್ದರು ಎಂದು ಸಚಿವರು ಸಿದ್ದರಾಮಯ್ಯ ಅವರ ಭಾಷಾ ಕಾಳಜಿ ಬಗ್ಗೆ ಸ್ಮರಿಸಿದರು. ಭಾಷೆ ಉಳಿಸಲು ತ್ರಿಸೂತ್ರ: ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ, ಆಡಳಿತದಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿಕೆ, ಈ ಮೂರು ಯೋಜನೆಗಳನ್ನು ಇಟ್ಟುಕೊಂಡಾಗ ಮಾತ್ರ ಭಾಷೆಯನ್ನು ಉಳಿಸಬಹುದು ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕಾಸರಗೋಡು ಶಾಸಕ ನೆಲ್ಲಿಕುನ್ನು, ಕಾಸರಗೋಡು ಜಿ.ಪಂ.ಸದಸ್ಯೆ ಶೈಲಜಾ ಭಟ್, ಕಾಸರಗೋಡು ಚೆಂಗಳ ಗ್ರಾ.ಪಂ.ಅಧ್ಯಕ್ಷ ಖಾದರ್ ಬದ್ರಿಯಾ, ವಕೀಲರಾದ ಬಿ.ಸುಬ್ಬಯ್ಯ ರೈ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಗಡಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಜಿ.ಮಧುಸೂದನ್ ರೆಡ್ಡಿ ಮತ್ತಿತರರಿದ್ದರು.