ರಸ್ತೆ, ಬೀದಿದೀಪ, ಸ್ವಚ್ಛತೆ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ

| Published : Aug 20 2025, 01:30 AM IST

ರಸ್ತೆ, ಬೀದಿದೀಪ, ಸ್ವಚ್ಛತೆ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎ.ಕೆ.ಮೈಲಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಪ್ರಸ್ತುತ ಸಭಾ ಅಜೆಂಡಾದಲ್ಲಿನ ವಿಷಯಗಳ ಚರ್ಚೆಗಿಂತ ಹಿಂದಿನ ಸಭೆಗಳ ಸಭಾ ನಡವಳಿಕೆಳನ್ನು ಓದಿ ಅವುಗಳ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು.

- ಹೊನ್ನಾಳಿ ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎ.ಕೆ.ಮೈಲಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಪ್ರಸ್ತುತ ಸಭಾ ಅಜೆಂಡಾದಲ್ಲಿನ ವಿಷಯಗಳ ಚರ್ಚೆಗಿಂತ ಹಿಂದಿನ ಸಭೆಗಳ ಸಭಾ ನಡವಳಿಕೆಳನ್ನು ಓದಿ ಅವುಗಳ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್ ಮಾತನಾಡಿ, ಕಳೆದ 5 ವರ್ಷಗಳಲ್ಲಿ ತಮ್ಮ 6ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬೀದಿದೀಪ, ಕಸ ವಿವೇವಾರಿ ಬಿಟ್ಟರೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಕ್ಕಿಲ್ಲ. ಒಳಚರಂಡಿ ಕಾಮಗಾರಿ ಗುತ್ತಿಗೆದಾರರು ರಸ್ತೆ ಕಿತ್ತು ಹಾಕಿದ್ದು, ಸಾರ್ವಜನಿಕರು ತಮಗೆ ಶಾಪ ಹಾಕುತ್ತಿದ್ದಾರೆ ಎಂದರು. ಆಗ ಎಲ್ಲ ವಾರ್ಡ್‌ ಪ್ರತಿನಿಧಿಗಳ ಸಭೆ ಕರೆದು ಅಗತ್ಯಕ್ಕೆ ಅನುಸಾರ ಅನುದಾನ ಹಂಚಿಕೆ ಮಾಡಬೇಕು ಎಂದು ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ಪುರಸಭೆಯ 7.25 ಶೀರ್ಷಿಕೆ ಅನುದಾನದಲ್ಲಿ ಹಿಂದುಳಿದ ವರ್ಗಗಳ ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣಕ್ಕೆ 80 ಸಾವಿರ ಹಿಂದುಳಿದ ವರ್ಗಗಳ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳಿಗಾಗಿ 1.43 ಲಕ್ಷ, ಹಿಂದುಳಿದ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ₹3.35 ಲಕ್ಷ ಹೀಗೆ ಒಟ್ಟು ₹5.58 ಲಕ್ಷಗಳ ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಎಸ್‌ಎಫ್‌ಸಿ ನಿಧಿಯಲ್ಲಿ ₹7 ಲಕ್ಷ ಕ್ರಿಯಾಯೋಜನೆ ತಯಾರಿಸಲಾಗಿರುವ ಮಾಹಿತಿಗಳನ್ನು ಸದಸ್ಯರ ಗಮನಕ್ಕೆ ತನ್ನಿ ಎಂದು ಸದಸ್ಯರಾದ ಎಂ.ಸುರೇಶ್ ಹಾಗೂ ಧರ್ಮಪ್ಪ ಒತ್ತಾಯಿಸಿದರು.

ಸಭೆಯಲ್ಲಿ ಹೊನ್ನಾಳಿಯಲ್ಲಿನ ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಅವರ ಹೆಸರಿಡುವ ಬಗ್ಗೆ ಪ್ರಸ್ತಾಪವಾಯಿತು. ಈ ಬಗ್ಗೆ ಅನುಮತಿಗಾಗಿ ಜಿಲ್ಲಾ ಕ್ರೀಡಾ ಇಲಾಖೆಯವರಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು .

ಹಿರಿಯ ಸದಸ್ಯ ಬಾವಿಮನೆ ರಾಜಣ್ಣ ಹಾಗೂ ಸದಸ್ಯ ಬಡಾವಣೆ ರಂಗಪ್ಪ ಮಾತನಾಡಿ, ಬೀದಿದೀಪಗಳು ಬೆಳಗಾದರೂ ಇಡೀ ದಿನ ಉರಿಯುತ್ತಿರುತ್ತವೆ. ಕರೆಂಟ್ ಬಿಲ್ ಕಟ್ಟುವವರು ಯಾರು, ಪುರಸಭೆಯಿಂದ ಬಿಲ್ ಕಟ್ಟುವ ಹಣ ಸಾರ್ವಜನಿಕರದ್ದಲ್ಲವೇ ಎಂದು ಪ್ರಶ್ನಿಸಿದರು.

ಸದಸ್ಯ ಧರ್ಮಪ್ಪ ಮಾತನಾಡಿ, ಮುಂದಿನ ಯಾವುದೇ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಡಳಿತಾಧಿಕಾರಿ, ಅರೋಗ್ಯಾಧಿಕಾರಿ, ಇತರೆ ಅಧಿಕಾರಿಗಳು ಪೂರ್ವ ತಯಾರಿ ನಡೆಸಿಕೊಂಡು ತಕ್ಷಣ ಹಾಗೂ ತ್ವರಿತವಾಗಿ ಮಾಹಿತಿ ಕೊಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಮುಖ್ಯಾಧಿಕಾರಿ ಲೀಲಾವತಿ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಸದಸ್ಯರಾದ ರಾಜೇಂದ್ರ, ಎಂ.ಸುರೇಶ್, ಕೆ.ವಿ.ಶ್ರೀಧರ, ರಂಜಿತಾ ವಡ್ಡಿ ಚನ್ನಪ್ಪ, ರಂಗಪ್ಪ, ಅನುಶಂಕರ ಗುಂಡ, ಸವಿತಾ ಹುಡೇದ್, ಸುಮಾ ಮಂಜುನಾಥ ಇಂಚರ, ಪದ್ಮಾವತಿ, ತನ್ವಿವೀರ್ ಅಹಮ್ಮದ್, ಸುಮಾ ಸತೀಶ್ ಹಾಗೂ ನಾಮನಿರ್ದೇಶಕ ಸದಸ್ಯರು, ಅಧಿಕಾರಿಗಳು ಇದ್ದರು.

- - -

(ಬಾಕ್ಸ್‌) * ಆರೋಪ ಮಾಡುವುದು ಸರಿಯಲ್ಲ: ಅಧ್ಯಕ್ಷ ಕಿಡಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಾಬು ಹೋಬಳದಾರ್ ಮಾತನಾಡಿ, ಅಧ್ಯಕ್ಷರ ವಾರ್ಡ್‌ನಲ್ಲಿ 15 ದಿನಗಳಿಗೊಮ್ಮೆ ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದರೆ, ಉಳಿದ ಸದಸ್ಯರ ವಾರ್ಡ್‌ಗಳಲ್ಲಿ ಸ್ವಚ್ಛತಾ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು. ಆಗ ಅಧ್ಯಕ್ಷ ಎ.ಕೆ.ಮೈಲಪ್ಪ ಕೋಪಗೊಂಡು ಪೌರಕಾರ್ಮಿಕರು ಎಲ್ಲ ವಾರ್ಡಗಳಲ್ಲಿ ಸಮನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ತಾರತಮ್ಯವಿಲ್ಲ. ಈ ರೀತಿ ಆರೋಪ ಮಾಡುವುದು ಸರಿಯಲ್ಲ ಬೇಕಾದರೆ ಈಗಲೇ ನಮ್ಮ ವಾರ್ಡಿಗೆ ಹೋಗೋಣ ಎಂದು ಎದ್ದು ನಿಂತರು. ಆಗ ಇತರೆ ಸದಸ್ಯರು ಮಧ್ಯಪ್ರವೇಶಿಸಿ ಅಧ್ಯಕ್ಷರಾದವರಿಗೆ ತಾಳ್ಮೆ ಇರಬೇಕು. ಎಲ್ಲರಿಗೂ ಸಮಾಧಾನದಿಂದ ಸೂಕ್ತ ಉತ್ತರ ನೀಡಿ ಎಂದರು.

- - -

-12ಎಚ್,ಎಲ್.ಐ2.ಜೆಪಿಜಿ: ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.